logo

Rajesh Shanbhaug

ಕಾಸರಗೋಡಿನ ಪೈಕ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಉತ್ತಮ ಚಿತ್ರಕಲಾವಿದರಾದ ಎಂ .ರಾಧಾಕೃಷ್ಣ ಶ್ಯಾನುಭೋಗ್ ಮತ್ತು ಭರತ ನಾಟ್ಯ ಕಲಿತಿರುವ  ಕನ್ನಡದಕೋಗಿಲೆ ಪಿ.ಕಾಳಿಂಗರಾಯರ ಮಗಳು ಪ್ರೇಮ ಆರ್ ಶ್ಯಾನುಭೋಗ್ ದಂಪತಿಗಳ ( ಅಕ್ಕ ವಾಣಿಶ್ರೀ ಬಿ .ರಾವ್ ಮೂಲ್ಕಿ, ದೊಡ್ಡಣ್ಣ ಎಂ.ವಿಜಯಶಂಕರ್ ,ಅಣ್ಣ ಗುರುರಾಜ್ ಎಂ.ಆರ್. ಕೋಟೇಶ್ವರ ) ಮೂರನೇ ಮಗನಾಗಿ ಬಾರ್ಕೂರಿನಲ್ಲಿ ಜನಿಸಿದ  ರಾಜೇಶ್ ಶ್ಯಾನುಭೋಗ್ ಕಾಸರಗೋಡಿನ ಪೈಕ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮಾಡಿ ತದನಂತರ ಎಡನೀರಿನ  ಶ್ರೀ ಕೇಶವಾನಂದಭಾರತಿ ಪಾದಂಗಳವರ ಸ್ವಾಮೀಜೀಸ್ ಹೈಸ್ಕೂಲ್ ನಲ್ಲಿ ವಿಧ್ಯಾಭ್ಯಾಸ ಮುಂದುವರಿಸಿ  ನಂತರ ಕಾಸರಗೋಡಿನ  ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮುಂದುವರಿಸಿ ನಂತರ ಮೈಸೂರಿನ ಕಾಲೇಜಿನಲ್ಲಿ ಕನ್ನಡ ಎಂ ಎ ಪದವಿ ಮುಗಿಸಿ ಅದರ ಜೊತೆ  ಮೂಡಬಿದ್ರೆಯಲ್ಲಿ ಕೋಪರೇಟಿವ್ ಟ್ರೈನಿಂಗ್ ಮಾಡಿ ಶಿವಮೊಗ್ಗ ಮತ್ತು ಹೈದ್ರಾಬಾದನಲ್ಲಿ ಕೋಪರೇಟಿವ್  ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿ ಮತ್ತು ಹೈದ್ರಾಬಾದ್ ನಲ್ಲಿ ನೈಟಿ ಡ್ಯೂಟಿ ಮೈತ್ರಿ ಪೋಲೀಸ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿ ತದನಂತರ ಬಾರ್ಕೂರಿಗೆ ಬಂದು ಹತ್ತು ವರುಷ ಪ್ರಸಿದ್ಧ ಆಯುರ್ವೇದ ಮೆಡಿಸಿನ್ ಕಂಪನಿ ಚರಕ್ ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ತದನಂತರ ಅಪೆಕ್ಸ್ ಕಂಪನಿಯಲ್ಲಿ ನಾಲ್ಕು ವರುಷ ಸೇವೆ ಸಲ್ಲಿಸಿ ಅದರ ಜೊತೆ ತಮ್ಮದೇ ಆದ  ಶ್ರೀ ಭಟ್ಟೆವಿನಾಯಕ ಆಯುರ್ವೇದಿಕ್ ಏಜೆನ್ಸಿ ಯನ್ನು ಬಾರ್ಕೂರಿನಲ್ಲಿ ಪ್ರಾರಂಭಸಿ ಕಳೆದ ಏಳು ವರುಷದಿಂದ ಯಶಸ್ವೀಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ರಾಜೇಶ್ ಶ್ಯಾನುಭೋಗ್  ಅವರ ವೃತ್ತಿಯ ವಿವರ ಇದು.

ಉತ್ತಮ ಕ್ರಿಕೆಟ್ ಆಟಗಾರ ಮತ್ತು ಉತ್ತಮ ವಾಲಿಬಾಲ್ ಆಟಗಾರನಾಗಿ ಕಾಸರಗೋಡು ಜಿಲ್ಲೆಯಲ್ಲಿ ಹೆಸರು ಮಾಡಿದ ರಾಜೇಶ್ ವ್ಯಾಯಾಮ ಪ್ರಿಯರು ದಿನವು ವ್ಯಾಯಾಮ, ಮಾಡುತ್ತಾ ದೇಹದ ಫಿಟ್ ನೆಸ್ ಗೆ ಪ್ರಾಮುಖ್ಯತೆ ನೀಡುವರು. 

ಇವರು  ಪ್ರವೃತ್ತಿಯಾಗಿ  ಸಂಗೀತ ಕ್ಷೇತ್ರವನ್ನು ಆಯ್ಕೆ ಮಾಡಿ ಸಂಗೀತ ಪಯಣ ಪ್ರಾಂರಂಭಿಸಿದ್ದು  ಸಣ್ಣವನಿದ್ದಾಗ. ಕಾಸರಗೋಡಿನಲ್ಲಿ ಭಜನೆ ಮಾಡುವ ಮೂಲಕ ಮೊದಲ ಹಾಡು ಹಾಡಿದರು. ತದನಂತರ ಗಾಯಕರಾದ ದೊಡ್ಡಣ್ಣ ವಿಜಯಶಂಕರ್ ಅವರ ಭಾವಬೆಳದಿಂಗಳು ತಂಡದಲ್ಲಿ ಸೋದರ ಮಾವಂದಿರಾದ ವಸಂತ್.ಪಿ.ಕಾಳಿಂಗರಾವ್ ಮತ್ತು ಶರತ್.ಪಿ.ಕಾಳಿಂಗರಾವ್ ಅವರ ಸಲಹೆಯ ಮೇರೆಗೆ ನಾಲ್ಕು   ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತದನಂತರ ಭಕ್ತಿಗೀತೆಗಳನ್ನು ಮತ್ತು ದಾಸರಪದಗಳನ್ನು ಹಾಡಲು ತಮ್ಮದೇ ತಂಡವನ್ನು ಅಜ್ಜ ಪಿ.ಕಾಳಿಂಗರಾಯರ ಸವಿನೆನಪಿಗಾಗಿ  ಪಿ.ಕಾಳಿಂಗರಾವ್ ಸ್ಮೃತಿ ಮೆಲೋಡೀಸ್ ಬಾರ್ಕೂರು  ತಂಡವನ್ನು ಕಟ್ಟಿ ಕಲಾವಿದರ ಆಯ್ಕೆ ಮಾಡಿ ಕಲಾವಿದರಾಗಿ  ಶ್ರೀ ದಯಾನಂದ ವಾರಂಬಳ್ಳಿ ಶ್ರೀ ,ರವಿಕಾರಂತ್ ಕೋಟ,ಶ್ರೀ ಉದಯ್ ಕುಮಾರ್ ಉಡುಪಿ, ಮತ್ತು ಶ್ರೀ ಕೃಷ್ಡ ಕಾಮತ್ ಹಾಲಾಡಿ ಶ್ರೀ ಭಾಸ್ಕರ ಆಚಾರ್ಯ ಬಸ್ರೂರು ಹೀಗೆ ಹಲವಾರು ಪ್ರಸಿದ್ಧ ಹಿನ್ನಲೆ ಕಲಾವಿದರ ಜೊತೆ ಬೆರೆತು ಮತ್ತು ಸಹಗಾಯಕಿಯರಾಗಿ ಮಾಧುರಿ.ಕೆ.ಭಟ್ ಕುಂಬಳೆ ಮತ್ತು ಸಹನಾ ನಾಯಕ್ ಕೊಕ್ಕರ್ಣೆ ಅವರೊಂದಿಗೆ ಮತ್ತು ನಾಡಿನ ಹಲವಾರು ಗಾಯಕ ಗಾಯಕಿಯರೊಂದಿಗೆ  ಸೇರಿ  ಕಾರ್ಯಕ್ರಮ  ನೀಡುತ್ತಾ ಈಗಾಗಲೇ ಕಳೆದ ಆರು ವರುಷದಲ್ಲಿ ಇನ್ನೂರೈತ್ತಕ್ಕು ಮಿಕ್ಕಿ ಕಾರ್ಯಕ್ರಮಗಳನ್ನು ರಾಜ್ಯ ಹೊರರಾಜ್ಯಗಳಲ್ಲಿ ಯಶಸ್ವೀಯಾಗಿ ನಡೆಸಿಕೊಂಡು ಬಂದಿರುತ್ತಾರೆ. ಕರ್ನಾಟಕ ಸಂಗೀತವನ್ನು ಗುರುಗಳಾದ ಮಧೂರು ಶ್ರೀ ಬಾಲಸುಬ್ರಮಣ್ಯಮ್  ಅವರ ಬಳಿ  ಕಲಿತು ಹಿಂದುಸ್ತಾನಿ ಸಂಗೀತವನ್ನು  ಶ್ರೀ ಶಂಭು ಭಟ್ ಅವರ ಬಳಿ ಕಲಿತಿರುತ್ತಾರೆ.

ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯಲ್ಲಿ ಕಳೆದ ಮೂರು ವರುಷದಲ್ಲಿ ಮೂರು ಬಾರಿ ತಂಡದೊಂದಿಗೆ ಯಶಸ್ವಿಯಾಗಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರ ತಂಡಕ್ಕಿದೆ.  ಮತ್ತು ನಾಡಿನ ಖ್ಯಾತ ಗಾಯಕರ ಸಮ್ಮಿಲನದಲ್ಲಿ  ಖ್ಯಾತ ಗಾಯಕರಾದ ರಮೇಶ್ ಚಂದ್ರ ಅವರ ಸಾರಥ್ಯದಲ್ಲಿ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಅಜ್ಜ ಪಿ.ಕಾಳಿಂಗರಾಯರ ಹಾಡು ಹಾಡಿ ಗಮನಸೆಳೆದರು. ತಮ್ಮ ಊರಾದ ಬಾರ್ಕೂರಿನಲ್ಲಿ ಐದೂವರೆ ವರುಷದಲ್ಲಿ 50 ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರ ತಂಡಕ್ಕಿದೆ .ಬಾರ್ಕೂರಿನ ಬಗ್ಗೆ ಹಾಡನ್ನು ಬಾರ್ಕೂರಿನ ಕವಿಗಳಾದ ಹಲಸನಕಟ್ಟೆ ಶ್ರೀ ಕೃಷ್ಣಮೂರ್ತಿ ಶಾಸ್ತ್ರೀ ಮತ್ತು ಪ್ರಶಾಂತ್ ವಿ ದೇವಾಡಿಗ ಅವರ ರಚನೆಯಲ್ಲಿ ಹಾಡಿದ ರಾಜೇಶ್ ನಂತರ ಊರಿನ ಪರ ಊರಿನ ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿ   ಕವಿಗಳಿಗೆ ಬೆಂಬಲ ನೀಡಿದ್ದಾರೆ . ಮೊದಲ ಬಾರಿಗೆ ಬಾರ್ಕೂರಲ್ಲಿ  ಬಾರ್ಕೂರ್ ಸ್ಪೋರ್ಟ್ ಆಂಡ್ ಕಲ್ಚರಲ್ ಕ್ಲಬ್ ಅವರ ಪ್ರಾಯೋಜಕತ್ವದಲ್ಲಿ ಊರಿನ ಹಾಡುಗಾರರಿಗೆ ಸ್ಪರ್ಧೆಯಾಗಿ, 'ವಾಯ್ಸ್ ಆಪ್ ಬಾರ್ಕೂರು' ಅನ್ನುವ ಹೆಸರಲ್ಲಿ ಸಂಗೀತ ಸ್ಪರ್ಧೆಯನ್ನು ಮಾಡಿದಾಗ ಅದರ ನಿರ್ದೇಶಕನಾಗಿ ಎಲ್ಲರ ಗಮನ ಸೆಳೆದು ಗಾಯಕನಾಗಿದ್ದ ರಾಜೇಶನಿಗೆ ಸ್ಪರ್ಧೆಯ ನಿರ್ದೇಶಕನ ಅವತಾರ ನೀಡಿದವರು ಬಾರ್ಕೂರು ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ನವರು.  ಅಲ್ಲಿ ಗುರುತಿಸಲ್ಪಟ್ಟ ಊರಿನ  ಕಲಾವಿದರು ಸ್ಪರ್ಧೆಯ ನಂತರ ಅವಕಾಶ ಇಲ್ಲದೆ ಹಲವಾರು ತಿಂಗಳು  ಸುಮ್ಮನಿದ್ದ ಕಾರಣ  ಅವರಿಗೆ ಅವಕಾಶ  ನೀಡುವ ಉದ್ದೇಶದಿಂದ ಹಾಡಿನ ತರಬೇತಿ ನೀಡಿ ವೇದಿಕೆ ಕಲ್ಪಿಸುವ ಸಲುವಾಗಿ ಬಾರ್ಕೂರು ಮೆಲೋಡೀಸ್ ಕರೋಕೆ ಗಾಯನ ತಂಡವನ್ನು ಕಟ್ಟಿ ಊರಿನ ಹತ್ತು ಮಂದಿ ಗಾಯಕರಿಗೆ ( ಹರೀಶ್ ಆಚಾರ್ಯ,ಪ್ರಜ್ನಾ ತಂತ್ರೀ ಹೇರಾಡಿ, ಹರೀಶ್ ಹೆಬ್ಬಾರ್ ಹವರಾಲು, ಗಣೇಶ್ ಪೂಜಾರಿ ಹೊಸಾಳ, ಸ್ವಸ್ತಿಕ ಬಾರ್ಕುರು,ಅರುಣ್ ಪೂಜಾರಿ ಹೊಸಾಳ ,ಭಂಢಿಮಠದ  ಭವ್ಯಶ್ರೀ ಆಚಾರ್ಯ ಮತ್ತು ಭಾಗ್ಯಶ್ರೀ ಆಚಾರ್ಯ, ಫ್ರ್ಯಾಂಕ್ಲಿನ್ ಫೆರ್ನಾಂಡೀಸ್ ) ಅವಕಾಶ ನೀಡಿದ್ದಾರೆ .

ಚಂದನ ಟಿವಿಯ ಮಧುರ ಮಧುರವೀ ಮಂಜುಳಗಾನದಲ್ಲಿ ಮೂರು ಬಾರಿ ಹಾಡಿದ ರಾಜೇಶ್,  ಯು ಚಾನಲ್ ಮತ್ತು ಕೋಟ ಕಾರಂತ ಥೀಂ ಪಾರ್ಕಿನವರ ಪ್ರಾಯೋಜಕತ್ವದ ಕಾಣದಕಡಲಿಗೆ ಸ್ಪರ್ಧೆಯ ನಿರ್ದೇಶಕನಾಗಿ ಬರೋಬ್ಬರಿ ಅರುವತ್ತು ಸ್ಪರ್ಧಾಳುಗಳ ಬೆಂಬಲದಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದರು.   ಸಂಗೀತ ಸ್ಪರ್ಧೆಯ ನಿರ್ದೇಶಕನಾಗಿ ಮಾರ್ದನಿ,ಸರಿಗಮಪ ಕೂರಾಡಿ, ಸಂಗೀತ ಮಹಾಯುದ್ಧ ಹೀಗೆ ಹಲವಾರು ಸ್ಪರ್ಧೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ   'ಚೆಂದುಳ್ಳಿ' ಆಡಿಯೋ ಸಿಡಿಗೆ  ರಾಗಸಂಯೋಜನೆಯನ್ನು ಮಾಡಿ ಹಾಡಿದ್ದಾರೆ. ಹಲವಾರು ವೀಡಿಯೋ ಹಾಡುಗಳಿಗೆ ಧ್ನನಿಯಾಗಿದ್ದಾರೆ.  ಹಲವಾರು ಸಂಗೀತ ಸ್ಪರ್ಧೆಗಳ ತೀರ್ಪುಗಾರರಾಗಿ ಗಮನ ಸೆಳೆದಿದ್ದಾರೆ. ನಗುನಗುತ್ತಾ ಎಲ್ಲರೊಂದಿಗೆ ಬೆರೆಯುವ ರಾಜೇಶ್  ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.  

ಕಳೆದ ಮೂರು ವರುಷದಿಂದ ಬ್ರಹ್ಮಾವರದ ಪ್ರತಿಷ್ಠಿತ ಎಸ್ ಎಮ್ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಗಮಸಂಗೀತ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಅದರ ಜೊತೆಗೆ  ಈ ವರುಷದಿಂದ ಬಾರ್ಕೂರು ಹೇರಾಡಿಯ ವಿಧ್ಯೇಶ ವಿದ್ಯಾಮಾನ್ಯ ಆಂಗ್ಲ ಮಾಧ್ಯಮ ಶಾಲೆಯ ಸುಗಮಸಂಗೀತ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಮಕ್ಕಳೊಂದಿಗೆ ನಗುತ್ತಾ ಖುಷಿಖುಷಿಯಾಗಿ ಬೆರೆತು ಕಲಿಸುವ ಸ್ವಭಾವದ ರಾಜೇಶ್ ಶ್ಯಾನುಭೋಗ್ ತಮ್ಮ ಮುಂದಾಳುತ್ವದಲ್ಲಿ  ಪಿ.ಕಾಳಿಂಗರಾವ್ ಸ್ಮ್ರತಿ ಮೆಲೋಡೀಸ್ ಮತ್ತು ಎಜ್ಯುಕೇರ್ ಕೋಚಿಂಗ್ ಅವರ ಪ್ರಾಯೋಜಕತ್ವದಲ್ಲಿ ಬಾರ್ಕೂರಿನಲ್ಲಿ ಸಂಗೀತ ತರಬೇತಿ ಕ್ಲಾಸು, ಅವರದೇ ತಂಡದ ಖ್ಯಾತ ಗಾಯಕಿ ಸಹನಾ ನಾಯಕ್ ಕೊಕ್ಕರ್ಣೆ ಅವರೊಂದಿಗೆ ಸೇರಿ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ .ಇದರ ಜೊತೆ ಡಿಂಕು ಅನ್ನುವ ಮಕ್ಕಳ ವೀಡಿಯೋ ಗೆ ಕುಂದಾಪುರ ಕನ್ನಡದಲ್ಲಿ ಧ್ವನಿ ನೀಡಿ ಬಹಳಷ್ಟು ಜನಪ್ರಿಯತೆ ಪಡೆದಿದ್ದಾರೆ. ವಿಡಿಯೋ ಎಡಿಟಿಂಗ್ ಕೂಡಾ ಬಲ್ಲವರಾಗಿದ್ದಾರೆ. ತಮ್ಮತಂಡಕ್ಕೆ ಕಾರ್ಯಕ್ರಮ ನೀಡಿದ ಎಲ್ಲಾ ಪ್ರಾಯೋಜಕರನ್ನು ದಿನವು ನೆನಪಿಸುವ ರಾಜೇಶ್  ತಮ್ಮ ತಂಡದೊಂದಿಗೆ ಕಾರ್ಯಕ್ರಮ ನೀಡುತ್ತಾ ತಮ್ಮ ಕ್ಲಾಸುಗಳು ಮತ್ತು ಏಜೆನ್ಸಿಯ ಕೆಲಸದೊಂದಿಗೆ ಪಿ.ಕಾಳಿಂಗರಾಯರ ಧರ್ಮಪತ್ನಿ ಮೀನಾಕ್ಷಮ್ಮ ಅವರು  ಮೂಡುಕೇರಿಯಲ್ಲಿ ನೀಡಿದ ಸ್ಥಳದಲ್ಲಿ  ಸೋದರಮಾವ ಸಂತೋಷ ಅವರ ಆಶೀರ್ವಾದದೊಂದಿಗೆ  ಏಳು ವರುಷದ ಹಿಂದೆ ಧೃತಿ ಹೆಸರಿನ ಮನೆಕಟ್ಟಿ  ಪತ್ನಿ ದೇವಿಕಾ ಪುತ್ರಿ ಧೃತಿ ರಾಜೇಶ್ ಜೊತೆ ಸುಖವಾಗಿದ್ದಾರೆ.

Add comment