ವ್ಯಸನಿ
ನಡುಗುತ್ತಿದೆ ಜೀವ
ಹೊಟ್ಟೆಯಲ್ಲೇನೊ ವಿಪರೀತ
ಸಂಕಟ ಪ್ರಾಣ ಹೋಗುವಷ್ಟು ನಿತ್ರಾಣ
ನಾಳೆಯಿಂದ ಇಲ್ಲ ಅಂದರೆ
ಅಪರಾತ್ರಿಯಲಿ!
ಸಹಿಸಿಲ್ಲವೇ ನಾವು
ಪ್ರತೀ ಬೆಲೆ ಏರಿಕೆನ
ತ್ರಾಣವೇ ತೆಗೆದಿರಲ್ಲ
ದ್ವನಿ ಎತ್ತದ ನಮಗೆ
ಕುಡಿದು ವಾಂತಿ ಮಾಡಿದ್ದು
ಇವರ ಆದಾಯಕ್ಕೆ.. ಮರೆತರೆ?
ಬೈಗುಳ ಒದೆ ತಿನ್ನುತ್ತಿದ್ದ ಹೆಂಡತಿ
ಮಕ್ಕಳೀಗ ಕ್ಯಾರೆ ಅನ್ನುತ್ತಿಲ್ಲ
ಕುಹಕ ನಗೆಯಂತಿದೆ
ಅವರ ಮಂದಹಾಸ ಕೂಡ
ಕುಡಿದದ್ದು ಮೂಗಿನ ಮಟ್ಟ
ಈಗ ಬರೇ ನೆನಪು
ಅಳತೆ ಮಾಡಿದ ರಸ್ತೆಗಳು
ಇನ್ನು ಎಲ್ಲಿ ಆ ಭಾಗ್ಯ?
ಅವರಿಗೆ ಮನೆಗೇ ಕೊಡುತ್ತಾರಂತೆ
ಇವರಿಗೇನು ರೋಗ?
ಗಂಟಲು ಒಣಗಿದ ಪರಿ..
ಒಂದು ತೊಟ್ಟೂ ಸಿಗಬಾರದೇ?
ಪ್ರಾಣ ಬೆದರಿಕೆ ನಮ್ಮವರ
ಲೆಕ್ಕ ಇಲ್ಲ ಇವರಿಗೆ
ಇವರಿಗೆ ಸಾಟಿ ಇವರೇ
ಬೇರೆ ಹೋಲಿಕೆ ಬೇಕೆ?
ಒಂದು ಬಾರಿ ಸಿಗುವಂತಾಲಿ
ಮದ್ಯ ತಲೆ ಮೇಲೆ ಎರೆದು
ಸ್ನಾನ ಮಾಡುವ ಆಸೆ!!
ಪುಸ್ತಕದ ನಶೆ
ಎಣ್ಣೆ ಕುಡಿದಿದೆ ಪುಸ್ತಕ
ಸಾಕಾಗಿದೆ ಅದಕ್ಕೂ ಅಕ್ಷರಗಳ
ಅಮಲು ಶಾಯಿಗಳ ಹಂಗು
ಮರೆತು ಬಿಡುವ ಹಂಬಲ
ಕಣ್ಣುಗಳ ವಕ್ರ ನೋಟ
ತೀಕ್ಷ್ಣ ಪರೀಕ್ಷೆಗಳ ಕಾಟ
ಬೇಕಾಗಿದೆ ಅದಕ್ಕೂ ಬಿಡುಗಡೆ
ಆದರೆ ಅಸ್ತಿತ್ವ ಉಂಟೇ!?
ಅಕ್ಷರಗಳಿಲ್ಲದೇ ಬದುಕಿಲ್ಲ
ಕೆಂಪು ನೀಲಿ ಕಪ್ಪು ಬಿಳುಪು
ಪ್ರಾಣ ಹೋಗುವ ತತ್ತರಿಸುವ
ಬಣ್ಣಗಳ ಓಕುಳಿ
ಅರ್ಥವಾಗದ ಗಣಿತ
ಜ್ಞಾನ ಕೊಡದ ವಿಜ್ಞಾನ
ಬೇಡವಾದ ಸಮಾಜ
ಇತಿಹಾಸಗಳ ಅಟ್ಟಹಾಸ
ಪ್ರಮೇಯ ಪ್ರಯೋಗ
ಹಿಂಡಿ ಹಿಪ್ಪೆಯಾದ ಜೀವ
ಭಾಷೆ ಇಲ್ಲದ ಭಾಷೆಗಳು
ವ್ಯಾಕರಣ ಛಂದಸ್ಸು ಚಿತ್ರ ವಿಚಿತ್ರ
ಒಂದೂ ಸರಿಯಾಗಿ ಬರದೆ ತಳಮಳ
ಟೀಚರ್ಸ್ ಗಳ ಒತ್ತಡ
ಮಕ್ಕಳ ಕಳವಳ
ಬಿಡುಗಡೆ ಬೇಕು ಬಂಧನದಲ್ಲೇ
ಅದಕ್ಕೇ ಎಣ್ಣೆ ಕುಡಿದಿದೆ
ಪುಸ್ತಕ ನೆಮ್ಮದಿಯಾಗಿ ಎಲ್ಲವನ್ನೂ
ಮರೆಯುವ ಬಯಕೆಯೊಂದಿಗೆ...
ಸಹಜೀವನ
ಏನಿಲ್ಲ ಇಂದು
ಬರೀಯ ಶೂನ್ಯ ಮನದ
ಗೋಡೆಯ ತುಂಬಾ
ಕತ್ತಲ ಮೌನ
ನಿನ್ನೆಗಳೆಲ್ಲವೂ ಕಳೆದು ಹೋದವು
ನಾಳಿನ ಬಗ್ಗೆ ನಾನರಿಯೆ
ಇಂದಿನದೇ ಕಾಣೆ
ಹೀಗ್ಯಾಕೆ ರಹಸ್ಯ
ಇಂದು ನಾಳೆಗೆ ನಿನ್ನೆಯಾಗಿ
ನಾಳೆ ಇವತ್ತಾಗಿ ಕರಗಿ
ಬಿಡುವ ವೂಹ್ಯ
ಬದುಕ ತುಂಬಾ ನಿನ್ನೆಗಳೇ
ಇವತ್ತಿನ ಲವಲೇಶವೂ ಇಲ್ಲದೆ
ನಾಳೆ ಏನು ಎಂಬ ಚಿಂತೆಯಲೇ
ಕಳೆದು ಹೋದವು
ಬೇತಾಳನಂತೆ ಭೂತಕಾಲ
ಇರುವನಲ್ಲ ಅಂಟಿಕೊಂಡೇ
ಸಹಜೀವನ ನನ್ನದು ಅದರೊಂದಿಗೆ
ಕೆಸರು
ಹುಸಿಯಾಗಿರುವುದು ಎಲ್ಲವೂ ಇಲ್ಲಿ
ಅಂಗ್ಯೆ ಹುಣ್ಣಿಗೆ ಕನ್ನಡಿ ಬೇಕೆ
ರಣ ಕೇಕೆಯ ಹದ್ದುಗಳು ಬದುಕುವ
ಭರವಸೆಯನ್ನೇ ಕಿತ್ತಿವೆ
ಕರಿಮುಗಿಲ ಕಾರ್ಮೋಡದಂತೆ
ಬಿತ್ತರಿಸಿದ ಕನಸುಗಳು
ಚದುರಿ ಹೋದವು ಬೀಸಿದ
ಚಂಡಮಾರುತಕೆ
ದಟ್ಟ ಕಾನನದಿ ಇರಲು ಕಣ್ಣಿಗೆ
ಪಟ್ಟಿ ಬೇರೆ ಕೇಡು ಒಂದೊಂದು
ಕಿರಣವೂ ಸುಡುವ ಸೂರ್ಯ
ಬೆಂಕಿ ಉಗುಳುವ ಹಾಗೆ
ಇನ್ನಿಲ್ಲದಂತೆ ಕಾಡುವ ಪ್ರಶ್ನೆಗಳಿಗೇಕೆ
ಉತ್ತರದ ಹಂಗು ಬದುಕೇ ಒಂದು
ಸವಾಲಾಗಿರುವಾಗ ವಿಧಿಗ್ಯಾಕೆ
ನಮ್ಮಗಳ ಮೇಲೆ ಸೇಡು ಗುಬ್ಬಿ
ಸಂಹರಿಸಲು ಬ್ರಹ್ಮಅಸ್ತ್ರ ಬೇಕೆ
ಬಾಯಿಗಿಡಲು ತುತ್ತು ಅನ್ನ
ಹರಿಸಲೇ ಬೇಕು ಬೊಗಸೆ ಬೆವರು
ಕೈ ಕೆಸರಾದರೆ ಬಾಯಿ ಮೊಸರು
ಅಂತಿರಲ್ಲ.. ದಯವಿಟ್ಟು ಈಗ
ಕೆಸರೆಲ್ಲಿದೆ ಹೇಳಿ?
ತಟ್ಟು ಚಪ್ಪಾಳೆ
ತಟ್ಟು ಚಪ್ಪಾಳೆ ಪುಟ್ಟ ಮಗು
ವ್ಯೆದ ಲೋಕ ಕೈ ಚೆಲ್ಲಿದೆ
ನಿನ್ನ ಚಪ್ಪಾಳೆ ಸ್ಪೂರ್ತಿ ತುಂಬಲಿ
ದೀಪ ಹಚ್ಚು ಪುಟ್ಟ ಮಗು
ಜಗತ್ತಲೆಲ್ಲಾ ಕತ್ತಲಾವರಿಸಿದೆ
ನಿನ್ನ ದೀಪ ಬೆಳಕ ನೀಡಲಿ
ಮನೆಯಲ್ಲೇ ಇರು ಪುಟ್ಟ ಮಗು
ವಿಕ್ರಮನ ಬೇತಾಳದಂತೆ
ಕೊರೊನಾ ಮಾರಿ ಅಂಗಳದಲ್ಲೇ ಇದೆ
ಅತ್ತು ಕರೆದು ಪುಟ್ಟ ಮಗು
ರಂಪಾಟ ಮಾಡಬೇಡ ನೀನು
ಬೇಕಾದ್ದು ಕೊಡಲು ಉಳಿದಿಲ್ಲ ಎನೂ
ಕೈಗಳ ಮುಗಿ ಪುಟ್ಟ ಮಗು
ಕಾಣದ ದೇವರಿಗೆ
ಅವನೊಬ್ಬನೇ ಈಗ ಆಸರೆ
ಜಾಣನಾಗು ಪುಟ್ಟ ಮಗು
ಲೋಕತಂತ್ರ ಕಲಿತು ನೀನು
ದೇಶನ್ನಾಳಲಿದೆ
ಹನಿಗವನಗಳು
ಕಪ್ಪು ಬಣ್ಣದ ಕನಸು ನನ್ನದು
ಬೇರೆ ಬಣ್ಣಗಳಿಗೆ ಅವಕಾಶವಿಲ್ಲ
ಬೆರೆತರೂ ಕಪ್ಪು ತನ್ನ ಮೂಲ
ಬಣ್ಣ ಬಿಟ್ಟು ಕೊಡಲ್ಲ
*********************
ನಿಮ್ಮ ಭಕ್ತಿಯ ಫಲದಲ್ಲಿ
ಪಾಲು ಇದೆ ನನ್ನದೂ
ಯಾಕೆ ಕೇಳಿ
ನಿಮ್ಮ ದೇವರಿಗೆ ಅರ್ಪಿಸುವ
ಹೂಗಳು ನನ್ನ ತೋಟದಲ್ಲವೇ
*********************
ಸತಾಯಿಸಿಯೇ ಸಾಯಬೇಕೆನ್ನುವ
ಆ ನೋವಿಗೆ ತಕರಾರಿಲ್ಲ ನನ್ನದೇನೂ
ನೋಯಿಸಿಯೇ ಸಾಯಿಸುವ
ಹುಟ್ಟುಗುಣ ಅದರದು
ಆ ವಿಕೃತ ಸಂತೊಷ
ನಮ್ಮಿಂದಲೇ ಕಲಿತಿರಬೇಕು
ನೋವು ಅನ್ನುವ ಭಾವ
ನಮ್ಮ ಹುಟ್ಟಿನಿಂದಲೇ
ಹುಟ್ಟಿರುತ್ತಲ್ಲ!
-ಬ್ರಿಜಿತ್ ಬಾರ್ಕೂರು.