logo

New Kannada Poems

✍️ ವನಿತ ಮಾರ್ಟಿಸ್.


 






ಜೀವನ


ಬೆಳಕನ್ನುಡುಕಿ ಬಂದೆ ಸಂಸಾರಿ ಬಾಳಿಗೆ

ಕಾರ್ಗತ್ತಲ ಬಾಳಿಗೆ ದೂಡಿದಂತಾಗಿದೆ ಜೀವನ

ಅಂಜೆನು ಕೇಡಿಗೆ, ಕಾಣೆನು ದಿಗಿಲನು, ಧೈರ್ಯವಿರೆ ಎನ್ನೊಳು

ಸಜ್ಜುಗೊಳಿಸುವೆ ನಾ ,ನನ್ನನೇ ಅನುಕ್ಷಣ....


ಆದರೂ.........

ಕುಪ್ಪಳಿಸಿದವು ಪರ್ವತಗಳು ಟಗರುಗಳಂತೆ

ಕಡಲೇ, ನಾ ಸಮೀಪಿಸಲು ಓಡುತ್ತಿರುವೆ ಏಕೆ?

ಸುತ್ತುಕೊಂಡಿವೆಯೆನ್ನನು ಮೃತ್ಯುಪಾಶಗಳು

ಬಿಗಿ ಹಿಡಿದಿವೆ ಪಾತಾಳ ವೇದನೆಗಳು!!


ನದಿಗಳೆಲ್ಲವೂ ಮರುಭೂಮಿಯಾದಂತಿವೆ

ಒಣನೆಲವಾಗಿದೆ ಬುಗ್ಗೆಗಳು

ಉಪ್ಪು ನೆಲವಾಗಿದೆ ಈ ಫಲಭೂಮಿ

ಭುವಿ ಬಾಯ್ದೆರೆದು ನುಂಗಿದೆ ನನ್ನಾಸೆಗಳನು!!


ಮಾಯವಾಗಿದೆ ನನ್ನೀ ಜೀವನ ಹೊಗೆಯಂತೆ

ಉರಿಯುತಿದೆ ಮನವು ಒಲೆಯ ಕೊರಡಿನಂತೆ

ಬಿಸಿಲಿಗೆ ಬಾಡಿದ ಹುಲ್ಲಿನಂತಾಗಿದೆ ಎನ್ನೆದೆ

ಕಾದು ಹಾತೊರೆದು ಎಲುಬು ತೊಗಲು ಆಗಿಬಿಟ್ಟೆ!!


ಸಂಕಟದಿ ಮೊರೆಯಿಟ್ಟು, ದೇವನ ಜಪಿಸಿದೆ

ದುಃಖವದೋ ಎನ್ನೆದೆಯ ಛಿನ್ನ ಛಿನ್ನವಾಗಿಸಿದೆ!!

ನೆನಪಿಗೆ ತಂದುಕೊಂಡೆ ಹಳೆಯ ದಿನಗಳು

ಸ್ಮರಣೆಯಲೇ ಉರುಳಿದವು ಹೋದ ವರುಷಗಳು...


ನೆನಪುಗಳೇ ನೆನಪಿಗೆ ಪ್ರತೀ ಇರುಳಿನೊಳು

ಆಲೋಚನೆ ಸುಳಿಯುತಿವೆ ನನ್ನಾಂತರ್ಯದೊಳು

ಪ್ರಶ್ನೆಗಳೇಳುವುವು ನೂರಾರು ಮನದೊಳು

ಏತಕ್ಕಾಗಿ ಬದುಕು ಈ ತೆರದಿ ಭುವಿಯೊಳು???


ದೇಹದಲ್ಲಿಲ್ಲ ಸೌಖ್ಯ, ಮನದಲ್ಲಿಲ್ಲ ಕ್ಷೇಮ

ಮುಳುಗಿಸಿಬಿಟ್ಟಿವೆ ದುಃಖವೆಂಬ ಗಾಯದೊಳು

ಬಾಗಿ ಕುಗ್ಗಿ ಅಲೆಯುತಿದೆ, ಮನ ದುಃಖದೊಳು

ಮನದಾಸೆ ಈಡೇರದೆ ಹುದುಗಿ ಹೋಗಿದೆ ಚೇತನ

ಅತ್ತತ್ತು ಮಬ್ಬಾಗಿದೆ, ನನ್ನೆರಡು ನಯನ ಸಾಧನ!!


ಉಲ್ಬಣಿಸುತಿದೆ ವೇದನೆಯು ಎಡೆಬಿಡದೆ....

ಮೌನತಾಳಿದೆ ನಾ, ತಿಳಿಸಲಾರದೆ ಸುಮ್ಮನಾದೆ..

ಎನ್ ಜೀವನ ಗೇಣುದ್ದ, ನನ್ನೆಣಿಕೆಗದು ಶೂನ್ಯ

ಈ ನನ್ ಜೀವನ ಕೇವಲ ಉಸಿರಿಗೆ ಸಮಾನ!!

 

ಪ್ರಭೂ.....

ಎನ್ನ ಮೇಲಕ್ಕೆತ್ತಿ ಬಿಸಾಡಿಬಿಟ್ಟಿರುವರೆಲ್ಲಾ

ಹಾರಲಾರದೆ, ಬೀಳಲಾರದೆ, ತವಕಿಸುತ್ತಿರುವೆನಲ್ಲಾ...

ನಾ ಕಾಲವಾಗಿ ಕಣ್ಮರೆಯುವ ಮುನ್ನ

ಸಂತಸದಿ ಬಾಳುವಂತೆ ಮಾಡೆನ್ನ!!


✍️ ವನಿತ ಮಾರ್ಟಿಸ್.

----------------------------------------

ಅಂದೊಂದು ದಿನ


ಬಾಗಿಲಲೇ ನಿಂತಿರುವೆ ನಾ

ಒಳಗೆ ಕರೆಯುತ್ತಿಲ್ಲ ನೀನು !

ನನಗೂ ಅತೀ ಮುನಿಸು

ಕರೆಯದೇ ಬರಲು ಇಲ್ಲ ಮನಸು !!


ಕಟ್ಟಿದ್ದೆ ನಾ ಸುಂದರ ಕನಸು

ಅರ್ಥವಾಗದು ನನಗೆ ನಿನ್ನ ಮುನಿಸು !

ಕರೆದು ನೋಡು ಒಮ್ಮೆ ನನ್ನ ಹೆಸರು

ಮರೆಯಲಾರೆ ಇರುವತನಕ ಉಸಿರು !!


ಇಬ್ಬರಲು ಮನೆಮಾಡಿದೆ ಬಿಗುಮಾನ

ಅಡ್ಡಲಾಗಿದೆ ನಮಗೆ ಸ್ವಾಭಿಮಾನ !

ಹಠವಾದಿ ಮುನಿಸುಧಾರಿ ನೀನು

ಮಾತಿನೊಳಗೆ ಕಿರಿಕಿರಿ ಸರಿಯೇನು !!


ಕಳೆದು ಹೋಯಿತು ಹೀಗೇ ಈ ಸುಂದರ ದಿನ

ಮನಸು-ಹೃದಯಗಳ ಬಡಿತ ಬರೀ ಮೌನ !

ಏನೇ ಆಗಲಿ, ನಾವಿಬ್ಬರೇ ಇಲ್ಲಿ ಪಾತ್ರಧಾರಿಗಳು

ಕೋಪ ಮರೆತು ಬಾಳುವ ಮಧುರ ಸಂಗಾತಿಗಳು!!! 


✍️ ವನಿತ ಮಾರ್ಟಿಸ್.

----------------------------------------

ನನ್ನ ಅಪ್ಪ

        

ಮುಂಜಾನೆ ನಾನೇಳುವ ಮುನ್ನ

ಸಂಸಾರದ ನೊಗವನ್ನೇ ಹೆಗಲಿಗೇರಿಸಿಕೊಂಡು

ಹೆಂಡತಿ-ಮಕ್ಕಳ ಸುಖಕ್ಕೆ ಹಗಲಿರುಳೂ

ದಣಿವರಿಯದೇ ದುಡಿಯುವ ಜೀವವಿದು !

ಇವರೇ ನನ್ನಪ್ಪ!! 

ನನ್ನ ಪೋಷಿಸಿದ ದೇವರು!!


ಸಣ್ಣವಳಿದ್ದಾಗ ನನ್ನ ಬೆನ್ನ ಮೇಲೆ ಕೂರಿಸಿ, 

ಕೂಸುಮರಿ ಆಡಿಸಿದಾತ........

ಕತ್ತಲಾಗುತ್ತಲೇ ತನ್ನ ತೊಡೆಯ ಮೇಲೆ ಕೂರಿಸಿ, ದೈವ-ಭಕ್ತಿ-ಜಪವ ಹೇಳಿಕೊಟ್ಟವನಾತ....

ಕೈ ತುಂಬಾ ಮಿಠಾಯಿ, ಬಿಸ್ಕಿತ್ತು ನೀಡಿ 

ಅಪ್ಪಿ ಮುದ್ದಾಡುವವನಾತ......

ಗದ್ದೆ ಕೆಲಸ, ಮನೆಕೆಲಸ ನಮ್ಮಿಂದ ನಗುನಗುತ್ತ ಮಾಡಿಸುತ್ತಿದ್ದನಾತ.....

ಇವರೇ ನನ್ನಪ್ಪ!! 

ನನ್ನ ಪೋಷಿಸಿದ ದೇವರು!!


ಮೊದಲ ದಿನ ಸೈಕಲ್ ಸವಾರಿಯಲಿ ಶಾಲೆಗೆ ಬಿಟ್ಟುಬಂದವನಾತ

ಅಆಇಈ....1234... ಕೈಹಿಡಿದು ಸ್ಲೇಟಿನಲಿ ಬರೆಸಿದವನಾತ

ಅಸ್ವಸ್ಥಳಾದರೆ ನಡುಗುವ ನನ್ನ ಬಿಗಿದಪ್ಪಿ, ಔಷಧಿ ಕುಡಿಸಿದವನಾತ

ಆಡುವಾಗ ನನ್ನೊಡನೆ ಆಡಿ ಉತ್ತೇಜಿಸುವವನಾತ

ಇವರೇ ನನ್ನಪ್ಪ!!

ನನ್ನ ಪೋಷಿಸಿದ ದೇವರು!!


ಅಲ್ಲಲ್ಲಿ ತೂತಾದ ಅಂಗಿ ತೊಟ್ಟು ತಾ ದಿನಕಳೆದನು

ಹರಿದ-ಸವೆದ ಚಪ್ಪಲಿಯಲ್ಲೇ ಮೌನವಾಗಿ ನಡೆದವನು

ಹೊಸ ಅಂಗಿ-ಬಂಗಾರ..ಗಳೆಂಬ ಆಸೆಯೇ ಇಲ್ಲದವನು

ಇದ್ದರೂ ತನ್ನಾಸೆಯ ಯಾರಿಗೂ ಹೇಳದವನು

ಇವರೇ ನನ್ನಪ್ಪ!!

ನನ್ನ ಪೋಷಿಸಿದ ದೇವರು!!


ಇಂದಿಗಿಂತ ನಾಳೆಯ ಚಿಂತೆ ಅವರ ಮುಖದಲ್ಲಿ

ಜವಾಬ್ದಾರಿ -ಹೊರೆ ಹೊತ್ತು, ಆತಂಕ ಮನದಲ್ಲಿ

ನೋವನ್ನೆಲ್ಲಾ ಉಂಡು, ಹಸನ್ಮುಖಿ ಬಾಹ್ಯ ಲೋಕದಲಿ

ಒಡನಾಟವಿದ್ದರೂ, ಮಾತಿಗಿಂತ ಮೌನವೇ ಹೆಚ್ಚು ಇವರಲ್ಲಿ

ಇವರೇ ನನ್ನಪ್ಪ!!

ನನ್ನ ಪೋಷಿಸಿದ ದೇವರು!!


ಎಲ್ಲರಿಗೂ ಒಳಿತನ್ನೇ ಬಯಸಿದವರು ನನ್ನಪ್ಪ!!

ಮೌನದಿಂದಲೇ ಜೀವನಗೆದ್ದ ಪರಾಕ್ರಮಿ ನನ್ನಪ್ಪ!!

ಕನಸು ನನಸಾಗಿಸಿದ ಸಾಹಸಿ, ನಿಸ್ವಾರ್ಥಿ ನನ್ನಪ್ಪ!!

ಹಾಸಿಗೆ ಹಿಡಿದರೂ ನಮಗಾಗಿ ಹಿತ ಬಯಸುವ ನನ್ನಪ್ಪ!! ನನ್ನ ಪೋಷಿಸಿದ ದೇವರು!!


ಮಲಗಿಯೇ ನಮ್ಮೆಲ್ಲರ ಬಗ್ಗೆ ಮರುಕ.......

ಇನ್ನೂ ನಮ್ಮ ಏಳ್ಗೆಗಾಗಿ ದುಡಿಯುವ ತವಕ........

ಅಪ್ಪಾ.... ನಾ ‌  ಹಾರೈಸುವೆ ನಿನಗೆ, 

  'ದೇವರ ಆಶೀರ್ವಾದ' ಕೊನೆತನಕ.!!!


✍️ ವನಿತ ಮಾರ್ಟಿಸ್.

Add comment