Click here to read the earlier poems by Vanitha Martis, Barkur
✍️ವನಿತಾ ಮಾರ್ಟಿಸ್.
ಮಾನವನ ನಾಲಿಗೆ
ದೇಹದ ಸಣ್ಣ ಅಂಗವಾಗಿ
ಜಗತ್ತನ್ನೇ ಆಳುವ ನಾಲಿಗೆ..!
ಮೂರ್ಖ ಸಂಭಾಷಣೆಯಿಂದ
ಪರರ ನಗಿಸುವ ನಾಲಿಗೆ.!!
ಪ್ರೀತಿಯ ಹೃದಯಗಳ
ದೂರ ಮಾಡುವ ನಾಲಿಗೆ..!
ನಂಬಿಕೆಯ ಗುಟ್ಟನ್ನು
ರಟ್ಟು ಮಾಡುವ ನಾಲಿಗೆ.!!
ಬೆಂಕಿ ಹೊತ್ತಿಸಿ ಮನಗಳ
ಸುಡಬಲ್ಲ ನಾಲಿಗೆ..!
ಒಬ್ಬರ ಹೊಗಳಿ
ಅಟ್ಟಕ್ಕೇರಿಸಬಲ್ಲ ನಾಲಿಗೆ.!!
ಇನ್ನೋರ್ವರ ತೆಗಳಿ
ನಾಶಕ್ಕಿಳಿಸುವ ನಾಲಿಗೆ..!
ನಿಂದೆ ಅಪಹಾಸ್ಯಗಳಿಂದ
ಪರರ ತೆಗಳುವ ನಾಲಿಗೆ.!!
ಸತ್ಯ ನೀತಿಯನು
ಎತ್ತಿ ಹೊಗಳುವ ನಾಲಿಗೆ..!
ದೇವರನು ನೆನೆದು,
ಜಪಿಸಿ, ಸ್ತುತಿಸುವ ನಾಲಿಗೆ.!!
ಮಾನವನ ಅಳೆದು,
ನಶಿಸಿ, ಶಪಿಸುವ ನಾಲಿಗೆ..!
ತನ್ನ ಶ್ರೇಷ್ಠತೆಯ ಬಡಾಯಿ
ತಾನೇ ಕೊಚ್ಚುವ ನಾಲಿಗೆ.!!
ಹಲವರ ಬಾಳಿನ ಚಕ್ರಕ್ಕೇ
ಬೆಂಕಿ ಹಾಕುವ ನಾಲಿಗೆ..!
ಒಂದೇ ಮಾತಿಂದ ಜಗವನೇ
ಸೋಲಿಸಬಲ್ಲ ನಾಲಿಗೆ.!!
ಅತಿಶ್ರೇಷ್ಠರನೂ ಹತೋಟಿಯಲ್ಲಿಡುವ ಸಾಮರ್ಥ್ಯವುಳ್ಳ ನಾಲಿಗೆ..!
ನ್ಯಾಯನೀತಿಯಿಂದ ಕ್ಷಮಿಸಿ
ಸಮಾಧಾನ ನೀಡುವ ನಾಲಿಗೆ.!!
ದುಡುಕದೆ, ಯೋಚನೆಯನ್ನು
ವ್ಯಕ್ತಪಡಿಸುವ ನಾಲಿಗೆ..!
ಕಿರು ಉತ್ತರದಿಂದ ಮರುಪ್ರಶ್ನೆ
ಬರದಂತೆ ಗೆಲ್ಲುವ ನಾಲಿಗೆ.!!
ಸವಿ ಸರಳ ನುಡಿಗಳೊಡನೆ
ಸ್ನೇಹ ಬೆಳೆಸುವ ನಾಲಿಗೆ..!
ಸನ್ನಡತೆ, ವಿದ್ಯೆಯನು
ಬೋಧಿಸುವ ನಾಲಿಗೆ.!!
ಒಂದೇ! ಎರಡೇ! ಹಲವು ರೀತಿಯಲಿ
ದುಡಿವ ಮಾನವ ನಾಲಿಗೆ..!
ಮಹಾದೇಹದಲಿ ಒಳಗಡವಿನಿಂತ
ಶ್ರೇಷ್ಠತೆಯ ಕಿರುನಾಲಿಗೆ.!!
ಒಳಿತನ್ನು ಬಯಸಿ, ಕೆಡುಕನ್ನು
ದೂರಾಗಿಸಲಿ, ನಮ್ಮೀ ನಾಲಿಗೆ..!
ಇಂಪಾದ ಸವಿಮಾತಿಂದ
ಮನೆ-ಮನ ತಣಿಸಲಿ ನಮ್ಮೀ ನಾಲಿಗೆ. !!
***************
ನನ್ನ ಕನಸು
ಬದುಕಿನ ಮೆಟ್ಟಲುಗಳ ಏರಲಾರದೆ
ಬಳಲಿ ನಾ ಕಾಣುತಿರುವೆ ಕನಸು
ಎದುರಾಗುತಿದೆಯಿಲ್ಲಿ ಜೀವಕೆ
ಉಸಿರಾಟಕೂ ಪರದಾಟ...
ಸೊರಗುತಿಹ ಬದುಕಿನಲಿ
ವರ್ತಮಾನದ್ದೇ ಯೋಚನೆ !!
ಹಳೆಯದೆಲ್ಲವನು ಚೀಲದಿ ಕಟ್ಟಿ
ಅಟ್ಟದಲ್ಲಿ ಬಚ್ಚಿಟ್ಟಿರುವೆನು...
ಹೊಸಗನಸೊಂದ ಕಾಣುತಿದೆ ಇಂದೆನ್ನ ಮನ
ಭಾಗ್ಯದೇವತೆ ಇಳಿದುಬರುವಳೇನೋ
ಹಸನು ಮಾಡಲು ಬಾಳು,
ಕಾಯುತಿರುವೆ ನಾನು !!
ಪುಟ್ಟಮನೆ, ಮೂರೊತ್ತಿನ ಕೂಳು
ಚಿಂತೆಯಿಲ್ಲದ ನಿದ್ರೆಬೇಕಿದೆ ದೇಹಕೆ
ಹರುಷವಿರಲು ಮನಕೆ ಮನದೊಳಗೆ
ಕನಸಲ್ಲಾದರೂ ಬೇಕಿದೆ ಚೆಲ್ಲಾಟ...
ನನ್ನ ಬಾಳು ಹಸನಾದರೆ..... ಚೆಂದ
ಹೆತ್ತವರ ಜೊತೆ ನನ್ನದೇ ಆನಂದ !!
ಕಾಯುತಿರುವೆ ಆ ವರದೇವತೆಯ ಆಗಮನಕೆ
ಅಗಲಿಸಿಕೊಂಡೆನ್ನ ಕರಕಮಲ
ಇಲ್ಲಿ ನನ್ನದೇ ನೋವು, ನನ್ನದೇ ನಲಿವು
ಕನಸು ಹೊತ್ತು ನಿರ್ಲಿಪ್ತ ಲೋಕದಲಿರುವೆನು
ಮತ್ತೆ ಹಗಲಿರುಳು ಕಾಯುತಿರುವೆ ನಾನು
ನನಸಾಗಬೇಕಿದೆ ಇನ್ನಾದರೂ ನನ್ನ ಕನಸು.!!!
***************
ಹೆಣ್ಣು ನಾನು
ಜೀವನವೆಂಬ ಅಗ್ನಿಜ್ವಾಲೆಯಲಿ ಬೆಂದರೂ, ಹಿಮದಂತಿಹೆ, ತಾಳ್ಮೆಯ ಪ್ರತಿಮೆ ನಾ!!
ನನ್ನ ಕಷ್ಟಗಳ ನಾ ನುಂಗಿ, ಮರುಭೂಮಿಯಲಿ ಚಿಮ್ಮುವಂತ ಓಯಸಿಸ್ ನಾ!!
ಜೀವ-ಜೀವಗಳಿಗೆ ಸ್ಪೂರ್ತಿಯಾಗಿ,ನೆಲೆಯಾದ ಶಾಂತ-ಸಹನಾಮೂರ್ತಿ ನಾ!!
ಭುವಿಯ ತೆರದಿ ಭಾರವ ಹೊತ್ತು, ನಿಶ್ಚಲ-ಅಛಲವಾಗಿ ನಿಂತ ಮೌನತೆಯ ಮಾತೆ ನಾ!!
ಒಡಲಲ್ಲಿ ಭಾವನೆಗಳ ತುಂಬಿ,ಮರ್ಯಾದೆಗಂಜಿ ಬದುಕುವ ಸದ್ಗುಣಶೀಲಳು ನಾ!!
ಒಲವಿನ ಧಾರೆಗಳ ತನ್ನೊಳಗೆ ಬರಸೆಳೆದು, ಎಲ್ಲೆ ಮೀರದೆ ಬದುಕುವ ಶಾಂತ ಕಡಲು ನಾ!!
ಬಿಡುವಿನ ವೇಳೆಯ ಅಲ್ಲಗಳೆಯದೆ, ತೋಟ-ಉದ್ಯಾನಗಳಲಿ ಹಸಿರಿನ ಉಸಿರು ನಾ!!
ಆಗು-ಹೋಗುಗಳಲಿ ಕೆಟ್ಟತನ ಮರೆತು, ಒಳ್ಳೆತನವ ಬೆಳೆಸಿ ನಕ್ಕು ನಲಿವ ಒಲವು ನಾ!!
ಜೀವನ ಜಂಜಾಟದ ಬೇನೆಗಳ ಮನದಲ್ಲಿ ಬಚ್ಚಿಟ್ಟ, ಸೆರಗಲ್ಲಿ ಕಟ್ಟಿಟ್ಟ ಮಹಾಮಾತೆ ನಾ!!
ಮನೆ ಮನವನು ಶುಚಿಯಿಟ್ಟು ಹಗಲಿರುಳು
ಸಂಸಾರದ ರಥವೆಳೆಯುವ ಗೃಹಿಣಿ ನಾ!!
✍️ವನಿತಾ ಮಾರ್ಟಿಸ್.
Click here to read the earlier poems by Vanitha Martis, Barkur