ಬ್ರಹ್ಮಕಲಶೋತ್ಸವ ಪ್ರಥಮ ರಥೋತ್ಸವ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಕಚ್ಚೂರು.
ಆತ್ಮೀಯ ಭಕ್ತಾಭಿಮಾನಿಗಳೇ,
ಉಡುಪಿ ಜಿಲ್ಲೆ ಬಾರ್ಕೂರಿನ ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರ ಈಗ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.
ಅನಾದಿ ಕಾಲದಿಂದಲೂ ಆಸ್ತಿಕರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು,ಶಕ್ತಿ ದೇವತೆಯ ಕ್ಷೇತ್ರವಾದ ಇಲ್ಲಿ ಭಕ್ತರು ಸಕಲ ಇಷ್ಟಾರ್ಥಗಳು ಈಡೇರುತ್ತಿದೆ. ಮುಖ್ಯವಾಗಿ ಕಂಕಣ ಭಾಗ್ಯ, ಸಂತಾನ ಪ್ರಾಪ್ತಿಯಂತಹ ಇಷ್ಟಾರ್ಥಗಳು ಫಲಿಸುತ್ತಿರುವುದು ಈ ಕ್ಷೇತ್ರದ ಮಹಿಮೆ. ವಿವಿಧ ಜಿಲ್ಲೆಯ ಭಕ್ತರು ಆರಾಧಿಸುತ್ತಾ ಬಂದಿರುವ ಕಾರ್ಣಿಕದ ದೈವ ಶ್ರೀ ಬಬ್ಬುಸ್ವಾಮಿ ಅವತರಿಸಿದ ಪುಣ್ಯ ಕ್ಷೇತ್ರವೇ ಶ್ರೀ ಕ್ಷೇತ್ರ ಕಚ್ಚೂರು.
ಶ್ರೀ ಕ್ಷೇತ್ರವನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಿದ ಸಮಿತಿ 2008ರಲ್ಲಿ ಕಲಾತ್ಮಕ ಸುಂದರ ಶಿಲಾಮಯ ದೇವಸ್ಥಾನ ಲೋಕಾರ್ಪಣೆ,2012 ರಲ್ಲಿ ಶ್ರೀ ಬಬ್ಬುಸ್ವಾಮಿ ಉಧ್ಭವದ ಬೈಲಕೆರೆ ಅಭಿವೃದ್ಧಿ ಹಾಗೂ ಭವ್ಯ ಮಾಲ್ತಿದೇವಿ ಸಭಾಭವನ ನಿರ್ಮಾಣ ಮಾಡಿ ,ಶ್ರೀ ಕ್ಷೇತ್ರ ಶೈಕ್ಷಣಿಕವಾಗಿ ಬೆಳಗಲಿ ಎಂಬ ದೂರುದೃಷ್ಟಿಯಿಂದ ಭೂಮಿ ಖರೀದಿಯೊಂದಿಗೆ ಇತರ ಸಮಾಜಿಕ,ಶೈಕ್ಷಣಿಕ ಚಟುವಟಿಕೆ ನಡೆಸುತ್ತಾ ಬಂದಿದೆ.
ಇದೀಗ ನಮ್ಮೆಲ್ಲರ ಹೆಮ್ಮೆಯ ಕಚ್ಚೂರು ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ,ರಥೋತ್ಸವ ಹಾಗೂ ವಾರ್ಷಿಕ ಜಾತ್ರಮಹೋತ್ಸವ ದಿನಾಂಕ 15.01.2020 ರಿಂದ 21.01.2020ರ ವರೆಗೆ ವಿಜೃಂಭಣೆಯಿಂದ ನಡೆಸಲು ನಿರ್ದರಿಸಲಾಗಿದೆ. ಈ ಐತಿಹಾಸಿಕ ಕ್ಷಣವನ್ನು ಅವಿಸ್ಮರಣೀಯ ಗೊಳಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಜಿಲ್ಲೆಗಳಿಂದ ಬೃಹತ್ ಹಸಿರು ಹೊರೆಕಾಣಿಕ ಮೆರವಣಿಗೆ, ನೂತನ ರಥ ಸಮರ್ಪಣೆ, ರಾಜ್ಯ ಮಟ್ಟದ ಜನಪದ ಉತ್ಸವ, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ ಮೊದಲಾದ ಕಾರ್ಯಕ್ರಮಗಳು ಜರುಗಲಿದ್ದು.ರಾಜ್ಯದೆಲ್ಲೆಡೆಯಿಂದ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಲಿದ್ದಾರೆ.
ಊರ ಪರವೂರ ಉದಾರ ಧಾನಿಗಳ ಭಕ್ತಿಯ ಮನಃಪೂರ್ವಕ ಸಹಾಯ, ಎಲ್ಲಾ ಶ್ರೀ ಬಬ್ಬುಸ್ವಾಮಿ ದೈವಸ್ಥಾನಗಳ,ಸಂಘಸಂಸ್ಥೆಯ ಉತ್ಸಾಹಿ ಸ್ವಯಂ ಸೇವಕರ ಶ್ರಮದಾನ,ಸಮಿತಿ ಸದಸ್ಯರ ನಿಸ್ವಾರ್ಥ ಮನೋಭಾವ ಹಾಗೂ ಶ್ರಮ ಈ ಐತಿಹಾಸಿಕ ಕಾರ್ಯಕ್ರಮ ಪೂರ್ಣತೆಗೆ ಸ್ಪೂರ್ತಿ.
ಬನ್ನಿ, ಹಿರಿಯರ ಧಾರ್ಮಿಕ ಪರಂಪರೆಯ ಹೆಜ್ಜೆಯ ಗುರುತುಗಳಲ್ಲಿ ಹೆಜ್ಜೆ ಇರಿಸೋಣ.ಜೀವಿತಾವಧಿಯಲ್ಲಿ ನಮಗೆ ದೊರಕಿದ ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಗಳಾಗೋಣ,ಅಳಿಲು ಸೇವೆ ಸಲ್ಲಿಸೋಣ,ಪುಣ್ಯ ಗಳಿಸೋಣ.ಈ ಆಪೂರ್ವ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಸಮರ್ಪಿಸೋಣ.
ಬನ್ನಿ,ಸೀತಾ ನದಿಯ ತಟದಲ್ಲಿ ನೆಲೆಸಿರುವ ಶ್ರೀ ಮಾಲ್ತಿದೇವಿಯ ಪುಣ್ಯಭೂಮಿ ಶ್ರೀ ಕ್ಷೇತ್ರ ಕಚ್ಚೂರಿಗೆ.