ಮೀನುಗಾರಿಕೆ ಬಲೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಗಣೇಶ್ ಪಾಂಡೇಶ್ವರ ನೆರವಿಗೆ ಧಾವಿಸಿದ ಕ್ರಿಶ್ಚಿಯನ್ ಸ್ನೇಹಿತರ ವ್ಯಾಟ್ಸಪ್ ಗುಂಪು ‘ನಾಯ್ಕ್ರ್ ಮಕ್ಕಳ್',
ಕೇವಲ ತಮ್ಮ ನಡುವಿನ ಸಂಪರ್ಕದ ಕೊಂಡಿಯಾಗಿ ಹಾಗೂ ಹಾಸ್ಯ ಮನರಂಜನೆಗಾಗಿ ದೇಶ ವಿದೇಶದಲ್ಲಿ ನೆಲೆಸಿರುವ ಸುಮಾರು 40 ಜನ ಸಮಾನ ಮನಸ್ಕ ಕ್ರಿಶ್ಚಿಯನ್ ಮಿತ್ರರು ಸೇರಿಕೊಂಡು ರಚಿಸಿಕೊಂಡಿದ್ದ
"ನಾಯ್ಕ್ರ್ ಮಕ್ಕಳ್" ಎನ್ನುವ ವ್ಯಾಟ್ಸಪ್ ಗ್ರೂಪಿನ ಸದಸ್ಯರು ಅಂತಾರಾಷ್ಟ್ರೀಯ ಕ್ರೀಡಾಪಟು ಗಣೇಶ್ ಪಾಂಡೇಶ್ವರ ನೆರವಿಗೆ ಧಾವಿಸಿದ್ದಾರೆ.
ಕಳೆದ 4 ದಿನಗಳ ಹಿಂದೆ ಗಣೇಶ್ ಪಾಂಡೇಶ್ವರ ಇವರು ತನ್ನ ಜೀವನೋಪಾಯಕ್ಕಾಗಿ ಮೀನು ಹಿಡಿಯಲು ಸಿದ್ದಮಾಡಿಕೊಂಡಿದ್ದ ಬಲೆಯನ್ನು ಯಾರೋ ಕಿಡಿಗೇಡಿಗಳು ಕದ್ದುಕೊಂಡು ಹೋದ ಕಾರಣದಿಂದ ದಿಕ್ಕು ತೋಚದೇ ಕಂಗಲಾಗಿದ್ದರು. ಮೂರು ಮಕ್ಕಳ ತಂದೆಯಾದ ಗಣೇಶ್ ಪಾಂಡೇಶ್ವರ ಮಾಸ್ಟರ್ ಆತ್ಲೆಟಿಕ್ಸ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ ಕ್ರೀಡಾಪಟು...
ತನ್ನ ಬಿಡುವಿನ ವೇಳೆಯಲ್ಲಿ ತುಂಬಾ ಜನ ಮಕ್ಕಳಿಗೆ ಹಾಗೂ ಪೊಲೀಸ್, ಸೈನ್ಯಕ್ಕೆ ಸೇರಲಿಚ್ಚಿಸುವ ಯುವಕರಿಗೆ ಕ್ರೀಡಾ ತರಬೇತಿ ನೀಡುತ್ತಾ ಬಂದಿರುತ್ತಾರೆ. ತನ್ನ ಹೊಟ್ಟೆ ಪಾಡಿಗಾಗಿ ಕಟ್ಟಡ ಕಾರ್ಮಿಕನಾಗಿ ಹಾಗೂ ಮೀನು ಹಿಡಿಯುವ ಉದ್ಯೋಗ ಮಾಡಿಕೊಂಡಿದ್ದರು.
ಇತ್ತೀಚೆಗೆ ಮಳೆಗಾಲದಲ್ಲಿ ಮೀನು ಹಿಡಿಯುವ ಉದ್ದೇಶದಿಂದ ಹೊಸ ಬಲೆ ಹಾಗೂ ಇತರ ಸಲಕರಣೆಗಳನ್ನು ಬಹಳಷ್ಟು ಕಷ್ಟ ಪಟ್ಟು ಸಿದ್ದಪಡಿಸಿಕೊಂಡಿದ್ದರು. ಆದರೆ ಯಾರೋ ದುಷ್ಕರ್ಮಿಗಳು ಅದನ್ನು ಕದ್ದುಕೊಂಡು ಹೋಗಿರುವುದು ಹಾಗೂ ಗಣೇಶ್ ಪಾಂಡೇಶ್ವರ ಸಂಕಷ್ಟದಲ್ಲಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ
"ನಾಯ್ಕ್ರ್ ಮಕ್ಕಳ್" ವ್ಯಾಟ್ಸಪ್ ಗ್ರೂಪಿನ ಸದಸ್ಯರು ಒಂದೇ ದಿನದಲ್ಲಿ ತಮ್ಮ ಸದಸ್ಯರಿಂದ ಹಣ ಸಂಗ್ರಹಿಸಿ ಗಣೇಶ್ ಪಾಂಡೇಶ್ವರ ಇವರಿಗೆ 41,000/- ರೂಪಾಯಿಗಳನ್ನು ಹಸ್ತಾಂತರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರೂಪಿನ ಎಡ್ಮಿನ್ ಗಳಾದ ಆಲ್ವಿನ್ ಅಂದ್ರಾದೆ, ಪ್ರವೀಣ್ ಕರ್ವಾಲೊ ಹಾಗೂ ಗ್ರೂಪಿನ ಸದಸ್ಯರಾದ ಸಿಪ್ರಿಯನ್ ಪಿಂಟೋ, ಫ್ರ್ಯಾಂಕ್ಲಿನ್ ಫೆರ್ನಾಂಡಿಸ್, ನವೀನ್ ಡಯಾಸ್, ಅಂಟೋನಿ ಪ್ರಕಾಶ್, ಅಲೆನ್ ಕ್ರಾಸ್ತ ಉಪಸ್ಥಿತರಿದ್ದರು.
L