ಅಳುಪೋತ್ಸವದ ನಂತರ ತೀವ್ರ ನಿರ್ಲಕ್ಷ್ಯ ಕ್ಕೆ ಒಳಗಾದ ಐತಿಹಾಸಿಕ ಬಾರಕೂರು ಕೋಟೆ.
-Anand Kumar Barkur
Click here to read an article on the same subject by Archibald Furtado
ಪ್ರವಾಸೋದ್ಯಮ ಇಲಾಖೆ,ಪ್ರಾಚ್ಯ ವಸ್ತು ಇಲಾಖೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದಿವ್ಯ ಮೌನ..
ಊರು ಸಣ್ಣದು, ಇತಿಹಾಸ ದೊಡ್ಡದು!
ಇದು ಉಡುಪಿ ಜಿಲ್ಲೆಯ ಬಾರ್ಕೂರು, ಒಂದು ಕಾಲದಲ್ಲಿತು ಳುನಾಡಿನ ಐತಿಹಾಸಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದ ನಗರ! ಆದರೆ ಕಾಲದ ಹೊಡೆತಕ್ಕೆ ಸಿಕ್ಕಿ ಬಾರ್ಕೂರು ಕಳೆಗುಂದಿದೆ, ಇಲ್ಲಿನ ಅಪೂರ್ವ ಶಿಲಾಕೃತಿಗಳು ಯಾರದ್ದೂ ಮನೆಯ ತಳಪಾಯ ಸೇರಿದೆ, ಭಾಷೆ, ಸಂಸ್ಕೃತಿ, ಜನಜೀವನದ ಅಧ್ಯಯನದ ದೃಷ್ಟಿಯಿಂದ ಅಮೂಲ್ಯ ಎನಿಸುವ ಶಿಲಾ ಶಾಸನಗಳು ಅಲ್ಲಲ್ಲಿ ಬಿದ್ದು ಹಾಳಾಗಿ ಹೋಗುತ್ತಿವೆ.
ಒಂದು ಕಾಲದಲ್ಲಿ ರಾಜ ವೈಭವದ ಆಡಂಬೋಲಗಳಿಗೆ ಸಾಕ್ಷಿಯಾಗಿದ್ದ ಪುರಾತನ ದೇವಾಲಯಗಳು, ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಮೂರು ಹೊತ್ತು ಪೂಜೆ ಮಾಡಲು ಅರ್ಚಕರಲ್ಲೂ ದುಡ್ಡಿಲ್ಲ, ವರ್ಷಕ್ಕೊಮ್ಮೆ ದೇವಾಲಯದ ಹುಂಡಿ ಬರಿದು ಮಾಡುವ ಸರ್ಕಾರಕ್ಕೆ ಇಲ್ಲಿನ ದೇವಾಲಯಗಳ ದುಸ್ಥಿತಿ ಕಾಣೋದು ಇಲ್ಲ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರಿನಂತಹ ಶ್ರೀಮಂತ ದೇವಾಲಯಗಳ ಆದಾಯ ಎಣಿಸುವ ಸರ್ಕಾರ, ಬಾರ್ಕೂರಿನ ಪುರಾತನ ದೇವಾಲಯಗಳ ಬಗ್ಗೆ ಮೌನ ವಹಿಸಿದೆ, ಇಲ್ಲಿನವರೇ ಒಬ್ಬರು ಮುಜರಾಯಿ ಸಚಿವರೂ ಅದ್ರೂ ಕೂಡ, ಬಾರ್ಕೂರಿಗೆ ಉಪಯೋಗವಾಗಿಲ್ಲ.
ಪ್ರವಾಸೋದ್ಯಮದ ಅಭಿವೃದ್ಡಿಯ ಬಗ್ಗೆ ಮಾತನಾಡುವ ಪ್ರವಾಸೋದ್ಯಮ ಇಲಾಖೆಗೆ ಬಾರ್ಕೂರಿನಂತಹ ಐತಿಹಾಸಿಕ ನಗರಿಯಲ್ಲಿ ಇರುವ ಅವಕಾಶಗಳು ಕಾಣುತ್ತಿಲ್ಲ. ಇದರ ಜೊತೆಗೆ ಪುರಾತತ್ವ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದು ಕೂಡ ಬಾರ್ಕೂರಿನ ಬಗ್ಗೆ ದಿವ್ಯ ಮೌನ!
“ತುಳು ರಾಜಧಾನಿ ಬಾರ್ಕೂರು ಈಗ ಬರೀ ನೆನಪು””ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ. ಕೇಳುವವರಿಲ್ಲ”
ಇಲ್ಲಿ ಬೇಲಿಗೆ ಇಟ್ಟ ಕಲ್ಲೂ ಇತಿಹಾಸ ಸಾರುತ್ತದೆ. ಮನೆಗಳ ಮೆಟ್ಟಿಲೂ ಚರಿತ್ರೆ ಹೇಳು ತ್ತದೆ. ಬಟ್ಟೆ ಒಗೆಯುವ ಕಲ್ಲುಗಳಲ್ಲೂ ಶಾಸನದ ಕಲ್ಲುಗಳಾಗಿವೆ.
ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಿನ ಇತಿಹಾಸ ಇಂದು ಬೀದಿ ಪಾಲಾಗಿದೆ. ಅರಮನೆ ನಾಶವಾಗಿದೆ. ಅರಮನೆ ಇದ್ದ ಜಾಗ ಪಾಳು ಬಿದ್ದಿದೆ. ಆನೆ, ಕುದುರೆ ಕಟ್ಟಿ ಹಾಕುತ್ತಿದ್ದ ಕಲ್ಲುಗಳು ಈಗ ದನ ಮೇಯಿಸಲು ಕಟ್ಟುವ ಕಲ್ಲುಗಳಾಗಿ ಮಾರ್ಪಾಡಾಗಿವೆ. 365 ದೇವಸ್ಥಾನಗಳಿದ್ದ ಬಾರಕೂರಲ್ಲಿ ಶೇ.75ರಷ್ಟು ದೇವಸ್ಥಾನಗಳು ನಾಮಾವಶೇಷವಾಗಿವೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ 13 ಕಿಲೋಮೀಟರ್ ಸಾಗಿದಾಗ ಸಿಗುವ ಸ್ಥಳ ಬ್ರಹ್ಮಾವರ. ಅಲ್ಲಿಂದ ಬಲಬದಿಗೆ ಸಾಗುವ ರಸ್ತೆಯಲ್ಲಿ 3 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಈ ಗತಕಾಲದ ವೈಭವದ ಪಳೆಯುಳಿಕೆಯ ನಾಡು, ತುಳುನಾಡ ಹಂಪೆ ಬಾರಕೂರು. ಗತ ಇತಿಹಾಸಗಳನ್ನು ಬದಿಗೆ ಸರಿಸಿ ನಡುವಲ್ಲಿ ಬಾರಕೂರು ಪುಟ್ಟ ನಗರವಾಗಿದೆ. ಈ ಸಣ್ಣ ಪೇಟೆ ಯನ್ನು ಬಿಟ್ಟು ಸುತ್ತ ಎತ್ತ ಹೋದರೂ ಶಾಸನದ ಕಲ್ಲುಗಳು, ಮಹಾಸತಿ ಕಲ್ಲುಗಳು, ಕೆರೆಗಳು, ದೇವಸ್ಥಾನಗಳು, ಬಾವಿಗಳು ಸಿಗುತ್ತವೆ. ಸುತ್ತ ಕೋಟೆ ಮತ್ತು ಅರಮನೆ ಇದ್ದ ಜಾಗ ಇವತ್ತಿಗೂ ಇದೆ. ಸುಮಾರು 25 ಎಕರೆ ಸ್ಥಳದ ಸುತ್ತ ಆಳವಾದ ಕಂದಕ ಸೃಷ್ಟಿಸಿ ಕೋಟೆ ನಿರ್ಮಿಸ ಲಾಗಿರುವುದು ಇವತ್ತಿಗೂ ಕಾಣಬಹುದು. ಅರಮನೆ ನೆಲಸಮವಾಗಿದ್ದರೂ ಕುದುರೆ, ಆನೆ ಕಟ್ಟುತ್ತಿದ್ದ ಲಾಯದ ಕಲ್ಲುಗಳು ಇವತ್ತಿಗೂ ಉಳಿದಿವೆ. ಸುತ್ತ ಹಸಿರು ಬೆಳೆದಿರುವುದರಿಂದ ಈ ಕಲ್ಲು ದನಗಳನ್ನು ಕಟ್ಟಲು ಉಪಯೋಗವಾಗುತ್ತಿದೆ. ರಾಣಿ ಸ್ನಾನ ಮಾಡುತ್ತಿದ್ದ ಕೆರೆ ಎನ್ನಲಾದ, ಕಲ್ಲಿನಿಂದ ಸುಂದರವಾಗಿ ಕಟ್ಟಲಾದ ಬಾವಿಯಲ್ಲಿ ಈಗಲೂ ನೀರಿದೆ. 6 ವರ್ಷದ ಹಿಂದೆ ಇಲ್ಲಿ ಉತ್ಕನನ ಮಾಡಿದಾಗ ಅರಮನೆಯ ಅಡಿಪಾಯ ಗುರುತಿಸಲು ಸಾಧ್ಯ ವಾಗಿದೆ.
ಸ್ವಲ್ಪ ದೂರದಲ್ಲಿ ಇವತ್ತು ಕತ್ತಲೆ ಬಸದಿ ಎಂದು ಕರೆಯಲಾಗುತ್ತಿರುವ ಬಸದಿ ಇದೆ. ಬಾರಕೂರಿನ ಸೋಮನಾಥೇಶ್ವರ ದೇವಾಲಯ ಚಾಲುಕ್ಯ ಶೈಲಿಯಲ್ಲಿದ್ದು, ಚಾಲುಕ್ಯ ಸಂಬಂಧವನ್ನು ಹೇಳಿ ದರೆ, ಈ ಬಸದಿ ಹೊಯ್ಸಳರ ಜತೆಗಿನ ನಂಟನ್ನು ತಿಳಿಸುತ್ತದೆ. ಇಲ್ಲಿ 24 ತೀರ್ಥಂಕರರ ಕಲ್ಲು ಇದೆ. ಅಚ್ಚರಿ ಎಂಬಂತೆ ಬಸದಿಯ ಒಳಗೆ ಶಿವಲಿಂಗ ಇದೆ. ಇದು ಬಳಿಕ ನಡೆದ ಧರ್ಮಾಕ್ರಮಣದ ಕುರುಹು ಇರಬಹುದು.
ಬಾರಕೂರು ಪೇಟೆ ಸಮೀಪ ಸಿಂಹಾಸನಗುಡ್ಡೆ ಎಂಬ ಪ್ರದೇಶವಿದೆ. ಇಲ್ಲೇ ಬೇತಾಳೇಶ್ವರ ದೇವ ಸ್ಥಾನ ಇರುವುದು. ಈ ಪ್ರದೇಶದಲ್ಲಿ ತ್ರಿವಿಕ್ರಮನ ಸಿಂಹಾಸನ ಇದ್ದು, ಇದನ್ನು ರಾಜನೊಬ್ಬ ಏರಲು ಬಂದಾಗ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಇದ್ದ ಗೊಂಬೆಗಳು ಕತೆ ಹೇಳುತ್ತಾ ಹೊರಟು ಹೋದಮೇಲೆ ಸಿಂಹಾಸನ ಭೂಗತವಾಯಿತು ಎಂಬುದು ಪ್ರತೀತಿ. ತ್ರಿವಿಕ್ರಮ ಇದ್ದಲ್ಲಿ ಬೇತಾಳ ಇರುವುದರಿಂದ ಬೇತಾಳೇಶ್ವರ ದೇವಸ್ಥಾನ ಇಲ್ಲಿದೆ.
ಬಾರಕೂರು ಇತಿಹಾಸ
ಭೂತಾಳ ಪಾಂಡ್ಯ ಇಲ್ಲಿ ಆಳುತ್ತಿದ್ದ ಎಂಬುದು ನಂಬಿಕೆ.ತುಳುನಾಡಿನಲ್ಲಿ ಮೊದಲೇ ಇದ್ದ ಅಳಿಯಕಟ್ ಅಥವಾ ಮಾತೃ ಸಂಸ್ಕೃತಿಯನ್ನು ಕಾನೂನು ಮೂಲಕ ಜಾರಿ ಮಾಡಿದಾತ ಈತ ಎಂಬ ಹೆಸರಿದೆ. ಸಂಸ್ಕೃತದ `ಭೂತಾಳ ಪಾಂಡ್ಯ ಚರಿತಂ’ ಕೃತಿಯ 13ನೇ ಅಧ್ಯಾಯದಲ್ಲಿ ಭೂತಾಳ ಪಾಂಡ್ಯ ಕ್ರಿ.ಶ. 77ರಲ್ಲಿ ಬಾರಕೂರಲ್ಲಿ ಆಳ್ವಿಕೆ ನಡೆಸು ತ್ತಿದ್ದ ಎಂಬ ಮಾಹಿತಿ ಇದೆ. ಮಹಿಷಾಸುರ ಆತನ ಆರಾಧ್ಯದೈವವಾಗಿದ್ದು, ಮಹಿಷಾಸುರ ದೇವಸ್ಥಾ ನ ಬಾರಕೂರಲ್ಲಿ ಈಗಲೂ ಇದೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿದೆ. ಪಾಂಡ್ಯ ವಂಶ 259 ವರ್ಷ ಆಡಳಿತ ನಡೆಸಿದೆ ಎಂದು `ಭೂತಾಳ ಪಾಂಡ್ಯ ಚರಿತಂ ‘ ಹೇಳುತ್ತದೆ. ಭೂತಾಳ ಪಾಂಡ್ಯನ ನ್ನು ಹೊರತುಪಡಿಸಿದರೆ ಬಾರಕೂರಿನ ಇತಿಹಾಸದಲ್ಲಿ ಅಳುಪರ ಆಡಳಿತವೇ ಕಾಣುವುದು.
ಏಳನೇ ಶತಮಾನದ ಆರಂಭದಲ್ಲಿ ಅಳುವರಸ ಬಾರಕೂರಲ್ಲಿ ಆಳ್ವಿಕೆ ನಡೆಸಲು ಆರಂಭಿಸಿದ. ಈತ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿಯ ಸಂಬಂ. ಇಲ್ಲಿಂದ ಅಳುಪರ ಆಳ್ವಿಕೆ ಆರಂಭ ಗೊಂಡಿದ್ದು 800 ಕ್ಕೂ ಅಧಿಕ ವರ್ಷ ಆಳ್ವಿಕೆ ನಡೆಸಿದೆ. ಆರಂಭದಲ್ಲಿ ಚಾಲುಕ್ಯರ ಸಂಬಂಧವಿದ್ದ ಅಳುಪರು ಬಳಿಕ ಹೊಯ್ಸಳರ ಜತೆ ಸಂಬಂಧ ಬೆಳೆಸಿದರು. ಅದರ ಪರಿಣಾಮವಾಗಿ ಬಾರಕೂ ನಲ್ಲಿ ಜೈನಬಸದಿಗಳು ನಿರ್ಮಾಣಗೊಂಡವು. ಹೊಯ್ಸಳ ದೊರೆ ವಿಷ್ಣುದೇವ ಜೈನ ಧರ್ಮಬಿಟ್ಟು ವೈಷ್ಣವ ಧರ್ಮ ಸ್ವೀಕರಿಸಿ ದಾಗ ಬಾರಕೂರಲ್ಲೂ ವೈಷ್ಣವ ದೇವಾಲಯಗಳು ರಚನೆಯಾದವು.
ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಅವರ ಸ್ಥಾನಿಕ ದೊರೆಗಳಾಗಿ ಆಳ್ವಿಕೆ ಮಾಡಿದ್ದರು. ನಂತರ ಕೆಳದಿ, ಇಕ್ಕೇರಿ ದೊರೆಗಳು, ಹೈದರಾಲಿ, ಟಿಪ್ಪು ಸಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಬ್ರಿಟಿಷರು ಆಳ್ವಿಕೆ ನಡೆಸಿದರು. ಸೀತಾನದಿಯ ಹಂಗಾರಕಟ್ಟೆ ಆಗ ವಾಣಿಜ್ಯ ಬಂದರು ಆಗಿತ್ತು. ಈ ನದಿಯಲ್ಲಿ ಸ್ವಲ್ಪ ದೂರ ಸಾಗಿದರೆ ಅರಬ್ಬಿ ಸಮುದ್ರ ಸಿಗುವುದರಿಂದ ಸರ್ವಋತು ಬಂದರಾಗಿತ್ತು.
ಪ್ರತಿ ಜಾತಿ ಸಮುದಾಯಕ್ಕೆ ಸಂಬಂಸಿದ ದೇವಸ್ಥಾನಗಳು ಬಾರಕೂರಲ್ಲಿದ್ದವಂತೆ. ತುಳುನಾಡಿನ ಎಲ್ಲ ಜಾತಿಗಳ ಮೂಲ ಬಾರಕೂರಾಗಿತ್ತು. ಇಲ್ಲಿ 365 ದೇವಸ್ಥಾನಗಳಿದ್ದು, ಪ್ರತಿ ದಿನ ಜಾತ್ರೆ ನಡೆಯುತ್ತಿತ್ತು. ರಾಜಪರಿವಾರ ದಿನಕ್ಕೊಂದು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದ ಎನ್ನಲಾಗಿದೆ. ಈಗ ಶೇ.75ಕ್ಕೂ ಅಧಿಕ ದೇವಾಲಯಗಳು ನಾಶವಾಗಿವೆ..
ಗತ ಕಾಲದ ವೈಭವ ವನ್ನು ಬಾರಕೂರುಮತ್ತೆ ಕಾಣುವಂತಾಗಲಿ..ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ,ಪ್ರಾಚ್ಯ ವಸ್ತು ಇಲಾಖೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯ ಪ್ರವರ್ತವಾಗಲಿ ಎಂದು ಈ ಮೂಲಕ ವಿನಂತಿಸಿ ಕೊಳ್ಳುತ್ತೇವೆ .
ನಮ್ಮ ಊರು ನಮ್ಮ ಹೆಮ್ಮೆ..
ಜೈ ಬಾರಕೂರು
Click here to read an article on the same subject by Archibald Furtado
Click here to read an article on the same subject by Archibald Furtado