logo

ಒಂದಿಷ್ಟು ಟಿಪ್ಸ್...ದೇಶಪ್ರೇಮಿಯಾಗಲು

ಒಂದಿಷ್ಟು ಟಿಪ್ಸ್...ದೇಶಪ್ರೇಮಿಯಾಗಲು

-ಎರಿಕ್ ಸೋನ್ಸ್, ಬಾರಕೂರು. 

ಬಯಲುಶೌಚ ಮಾಡಿದ ಕಾರಣಕ್ಕೆ ದಲಿತ ಕಂದಮ್ಮಗಳನ್ನು ಲಾಠಿಯಿಂದ ಹೊಡೆದು ಸಾಯಿಸಿದ್ದಕ್ಕೆ ಪ್ರತಿಕ್ರಿಯಿಸ್ಬೇಕೆ?

ಅಯ್ಯೋ, ಪುರುಸೊತ್ತಿಲ್ಲ ಕಣ್ರೀ

ಗೋವಿನ ಚಿತ್ರವನ್ನು ಹತ್ತು ದಿನ ಬಿಡದಂತೆ ಫೇಸ್‌ಬುಕ್‌ನ ಪ್ರೊಫೈಲ್ ಪಿಕ್ ಮಾಡ್ಬೇಕಾಗಿದೆ,

ನಿಜವಾದ ದೇಶಪ್ರೇಮಿಯಾಗಬೇಕಾಗಿದೆ...


'ಅಸಹಾಯಕ ಕುಟುಂಬದ ಬೆನ್ನೆಲುಬಾಗಿ' ಎಂಬ ಕ್ಷುಲ್ಲಕ ಮೊರೆಯೇ?

ಪಕ್ಕಕ್ಕಿಡಿ ಸ್ವಾಮಿ,

ಲಕ್ಷ ಜನ ಜೊತೆ ಸೇರಿ ಹಾಡಿದ ರಾಷ್ಟ್ರಗೀತೆಯ ವೀಡಿಯೋವನ್ನು 50 ಜನರಿಗೆ ಶೇರ್ ಮಾಡ್ಬೇಕಾಗಿದೆ,

ಅಸಲು ದೇಶಪ್ರೇಮಿಯಾಗಬೇಕಾಗಿದೆ...


ಕಾಶ್ಮೀರಿಗಳ ಹಕ್ಕನ್ನು ಎತ್ತಿ ಹಿಡೊಯೋ ಪಿಟಿಶನ್ನಿಗೆ ಸಹಿ ಹಾಕಬೇಕೇ..!??

ಸ್ವಲ್ಪ ಸುಮ್ನಿರ‌್ತಿರೇನು..

ರಾಷ್ಟ್ರಧ್ವಜವನ್ನು ಕಾಲಲ್ಲಿ ತುಳಿದವನ ಚಿತ್ರವನ್ನು ಅವನು ಸಿಗುವ ತನಕ ಬಿಡದಂತೆ ಕಳಿಸಲಿಕ್ಕಿದೆ,

ಕೆಚ್ಚೆದೆಯ ದೇಶಪ್ರೇಮಿಯಾಗಬೇಕಾಗಿದೆ...


ಎರಡು ವರ್ಷದ ಮಗುವನ್ನು ರೇಪ್ ಮಾಡಿದವರ ವಿರುದ್ಧ ಧ್ವನಿ ಎತ್ತಬೇಕೇನು..!!!

ಅಯ್ಯೋ..ದೇವ-ದೇವಿ ಸ್ತೋತ್ರಗಳ ಆಡಿಯೋ ಫೈಲ್‌ಗಳನ್ನು ಬಿಡುವಿಲ್ಲದೇ ಫಾರ್ವರ್ಡ್ ಮಾಡ್ಬೇಕಾಗಿದೆ,

ಧರ್ಮಪ್ರಸಾರಿ ದೇಶಭಕ್ತನಾಗಬೇಕಾಗಿದೆ...


'ನೀವು ನಿಜವಾದ ಭಾರತೀಯರಾದರೆ' ಎಂಬ ಕ್ಯಾಪ್ಶನ್ ಓದಿದ ತಕ್ಷಣ ಮಂತ್ರಮುಗ್ಧನಾಗಿ 'ಲೈಕ್' ಒತ್ತಬೇಕಾಗಿದೆ...


ನಾನೆಷ್ಟು ಕಟ್ಟಾ ಧರ್ಮಾನುಯಾಯಿ ಎಂದು ತೋರಿಸುವ ಉಗ್ರ ಸ್ಟೇಟಸ್‌ಗಳನ್ನು ಹುಡುಕಿ ಹುಡುಕಿ ಹಾಕಬೇಕಾಗಿದೆ...


ಬಹುಸಂಖ್ಯಾತನಾದರೂ 'ನನ್ನ ಧರ್ಮವನ್ನು ಆಪತ್ತಿನಿಂದ' ಉಳಿಸಿ' ಎಂಬ ಬೇಡಿಕೆಗಳ ಪಿಕ್‌ಗಳನ್ನು ಎಲ್ಲಾ ಫ್ರೆಂಡ್ಸ್‌ಗಳಿಗೂ ಟ್ಯಾಗ್ ಮಾಡಬೇಕಾಗಿದೆ...


ನಮ್ಮ ಸರದಾರ 'ಕುರ್ತಾಪೈಜಾಮದಲ್ಲಿ ಚೆಂದ ಕಾಣ್ತಾರೋ, ಇಲ್ಲ ಸೂಟ್‌ನಲ್ಲೋ?' ಎಂದು ಒಂದೈವತ್ತಾದರೂ ಕಮೆಂಟ್ ಮಾಡಬೇಕಾಗಿದೆ...


ಅಯ್ಯೋ.. ನಿಮ್ ಹತ್ತಿರ ಮಾತಾಡ್ತಾ ಕೂರೋಕಾಗಲ್ಲ ಸ್ವಾಮಿ..

ಎದುರಾಳಿಯ ಬಗ್ಗೆ ಒಂದಿಷ್ಡು ಅಪಹಾಸ್ಯದ ಸರಕನ್ನು ತಯಾರಿಸ ಬೇಕಾಗಿದೆ,

ಹಂಡ್ರೆಡ್ ಪರ್ಸೆಂಟ್ ದೇಶಪ್ರೇಮಿಯಾಗಬೇಕಾಗಿದೆ...


ನೆರವಿನ ಕೈಯ್ಯಾಗೋ ಸವಕಲು ಮಾತು ಬಿಡಿ, 

ಗೋಡೆಗಳ‌ ಮೇಲೆ ಗೀಚುತ್ತಾ ಹೋಗಿ...

ಸಿಕ್ಕಸಿಕ್ಕಲ್ಲಿ ಸ್ಖಲಿಸುತ್ತಾ ಹೋಗಿ...

ಅರಿಮರ್ದನ ದೇಶಪ್ರೇಮಿಯಾಗಬೇಕಾಗಿದೆ...

ಹೆಮ್ಮೆಯ ಭಾರತೀಯನಾಗಬೇಕಾಗಿದೆ...


                                  - ಎರಿಕ್ ಸೋನ್ಸ್ ಬಾರಕೂರು

Leave Your Comment