logo

35th Anniversary Wishes

Article by Sindhu Bhrgavi

Pics by Vishwas Studio, Barkur.

ಹೆತ್ತವರಿಗೊಂದು ಹಾರೈಕೆ

ಬರೆದವರು: ತುಳಸಿ ಭಟ್ (ಸಿಂಧು ಭಾರ್ಗವ್ ಬರಹಗಾರ್ತಿ)

     "ಅಪ್ಪ-ಅಮ್ಮ ನಿಮಗೋಸ್ಕರ ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ಅರಿವಾಗಲು, ನಿಮ್ಮ ಅನುಭವಕ್ಕೆ ಬರಲು ನಿಮಗೆ ಮದುವೆಯಾಗಿ ಎರಡು ಮಕ್ಕಳಾಗಿರಬೇಕು..." ಎಂದು ನಮ್ಮ ಅಜ್ಜಿ ಯಾವಾಗಲೂ ಹೇಳುತ್ತಾ ಇದ್ದರು. ಹೌದು ಈಗ ಎಲ್ಲ ಅನುಭವಕ್ಕೆ ಬರುತ್ತಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಗುಣನಡತೆ, ಶಿಸ್ತು ಬದ್ಧ ಜೀವನ ಕಲಿಸಿಕೊಡಲು, ಅವರ ಬೇಕು ಬೇಡಗಳ ಪೂರೈಸಲು ಎಷ್ಟು ಶ್ರಮಪಟ್ಟರೂ ಸಾಲದು. 

     ಮೊದಲಿಂದಲೂ ಒಂದು ವರ್ಗದ ಮಕ್ಕಳು ರಚ್ಚೆ ಹಿಡಿದೇ ತಮ್ಮ ಬೇಕು-ಬೇಡಗಳ ಪೂರೈಸಿಕೊಳ್ಳುತ್ತಿದ್ದರು‌. ಅವರ ಅಸ್ತ್ರವೇ ಅದಾಗಿತ್ತು‌. ಈಗಲು ಅಂತಹ ಮಕ್ಕಳನ್ನು ನಾವು ಕಾಣಬಹುದಾಗಿದೆ. ಸೌಮ್ಯಸ್ವಭಾವದ, ಹೆತ್ತವರು ಹೇಳಿದಂತೆ ಕೇಳುವ ಮಕ್ಕಳು ಆಗಲೂ ಇದ್ದರು. ಈಗಲೂ ಇದ್ದಾರೆ‌. ಅದರಲ್ಲಿ ರಚ್ಚೆ ಹಿಡಿಯುವ, ಕಿರುಚುವ, ಹಠಮಾಡುವ, ಹೇಳಿದ ಮಾತನ್ನು ಕೇಳದ ಮಕ್ಕಳನ್ನು ಬೆಳೆಸುವುದು ಒಂದು ಸವಾಲೇ ಸರಿ. ಏನೋ ಒಂದು ಕೊರತೆ ಅವರನ್ನು ಕಾಡುವುದರಿಂದ ಅಥವಾ ಅವರ ಕಡೆಗೆ ಗಮನ ಹರಿಸುತ್ತಿಲ್ಲ, ಪ್ರೀತಿ-ಕಾಳಜಿ ಕಡಿಮೆಯಾಗುತ್ತಿದೆ ಎನ್ನುವುದನ್ನು ಸಾರಿಹೇಳಲೆಂದೋ ಅಂತಹ ಮಕ್ಕಳು ಹಠಮಾಡುತ್ತ ಇರುತ್ತಾರೆ. 

      ಅದೆಷ್ಟೋ ಕಷ್ಟದ ಪರಿಸ್ಥಿತಿಯಲ್ಲಿಯೂ ಹಣಕಾಸಿನ ತೊಂದರೆಯಾದಾಗಲೂ ಮಕ್ಕಳ ಅರಿವಿಗೆ ಬರದ ಹಾಗೆ ನೋಡಿಕೊಂಡು, ಅವರ ಎಲ್ಲ ಗುಣಾವಗುಣಗಳ ಸಹಿಸಿಕೊಂಡು ಜೀವನ ನಡೆಸಿಕೊಂಡು ಹೋಗುವ ಹೆತ್ತವರು ನಿಜಕ್ಕೂ ಗ್ರೇಟ್. "ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗೇ ಸಾಯುವುದು ತಪ್ಪು" ಎನ್ನುವ ನಾಣ್ನುಡಿಯಂತೆ ಕಷ್ಟದ ದಿನಗಳ ಕರಿ ತೊಳೆದು ಆರ್ಥಿಕವಾಗಿ ಸ್ಥಿತಿವಂತರಾಗುತ್ತ ಹಿರಿಯರ ಆಶಿರ್ವಾದದಂತೆ ಉತ್ತರೊತ್ತರ ಏಳಿಗೆ ಕಾಣುತ್ತ ದೇವರ ಅನುಗ್ರಹದಿಂದ ತಮ್ಮ ನಿವೃತ್ತಿ ಜೀವನ ನೆಮ್ಮದಿಯಿಂದ ಜೀವಿಸುವುದರ ಹಿಂದೆ ಹೆತ್ತವರ ಒಂದು ದೊಡ್ಡ ತ್ಯಾಗ, ತಪಸ್ಸಿನ ಪಾತ್ರವಿರುತ್ತದೆ. 

     ಅಂತಹ ಹೆತ್ತವರ ಪಡೆದ ನಾವೇ ಧನ್ಯರು. ಹೌದು. ಬಾರಕೂರು ಯೆಡ್ತಾಡಿ ಗ್ರಾಮದ ಪುಟ್ಟ ಊರು ಚಂಡೆ. ಅಲ್ಲಿ ಚಂಡೆ ಶ್ರೀ.ನರಸಿಂಹ ಭಟ್ ಮತ್ತು ಶ್ರೀಮತಿ ವಸಂತಿ ಎನ್. ಭಟ್ ಅವರು ಇಂದು ತಮ್ಮ ಮೂವತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವೃತ್ತಿಯಲ್ಲಿ ಪಾಕತಜ್ಙರು. ಬಾರಕೂರಿನಲ್ಲಿರುವ ಪ್ರತಿಯೊಂದು ದೇವಸ್ಥಾನದ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಬರುವ ಭಕ್ತಾದಿಗಳಿಗೆ (ಸುಮಾರು ಮೂವತ್ತೈದರಿಂದ ನಲವತ್ತು ಸಾವಿರ ಜನರಿಗೆ ಅಡುಗೆ ಮಾಡಿದ ಅನುಭವ ಇವರಿಗಿದೆ) ಮಧ್ಯಾಹ್ನ, ರಾತ್ರಿಯ ಭೋಜನಕ್ಕೆ ಊಟದ ವ್ಯವಸ್ಥೆ ಮಾಡಿದ ಹಿರಿಮೆ ಇವರಿಗಿದೆ. ಸಾರು, ಸಾಂಬಾರು, ಗೋದಿಪಾಯಸ, ಸಿಹಿಖಾದ್ಯಗಳು ಏನೇ ಇದ್ದರೂ ಎಲ್ಲದರಲ್ಲೂ ಹೀಗೇ ಆಗಬೇಕು, ಯಾವಾಗ ಮಾಡಿದರೂ ಒಂದೇ ತೆರನಾದ ರುಚಿ ಬರಬೇಕು ಎಂಬ   ಪರಿಪೂರ್ಣತೆ , ಬದ್ಧತೆ ಇವರ ರಕ್ತದಲ್ಲೇ ಇದೆ. ಹಾಗಾಗಿ ಪ್ರಾಮಾಣಿಕವಾಗಿ ದೇವರಿಗೊಂದು ಸೇವೆ ಎಂಬಂತೆ ತಮ್ಮ ಕರ್ತವ್ಯ ಮೆರೆದಿದ್ದಾರೆ. 

      ಊರ ಜನರಿಗೆ ಇವರೆಂದರೆ ಎಲ್ಲಿಲ್ಲದ ಪ್ರೀತಿ. ಹಿತಶತ್ರುಗಳ ಕಾಟವಿದ್ದರೂ ಹೋರಾಡಿ ಜಯಿಸಿದವರು. ನಿಜ. ನೀವು ಇದೇನೂ ಯುದ್ದವೇ ಎನ್ನಬಹುದು? ವೃತ್ತಿ ಮಾತ್ಸರ್ಯ ಎಂತಹ ನೀಚ ಕೆಲಸಕ್ಕೂ ಇಳಿಸುತ್ತದೆ. ಜನರ ಮನಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದು. ಹೆಸರು, ಗೌರವಕ್ಕೆ ಚ್ಯುತಿ ಬರುವ ಹಾಗೆ ಮಾಡಲು ತಾ ಮುಂದು ನಾ ಮುಂದು ಎಂಬಂತೆ ಕಾದು‌ ಕುಳಿತಿರುತ್ತಾರೆ. ಯಾರ ಕೈಗೂ ಸಿಗದೇ, ಜಾಗರೂಕತೆಯಿಂದ ತಮ್ಮ ವೃತ್ತಿಬದುಕನ್ನು ನಿಭಾಯಿಸಿ ಈಗ ನಿವೃತ್ತಿ ಘೋಷಿಸಿದವರು. ಆದರೂ "ಭಟ್ರೆ ನಿಮ್ಮ ಸಾರು. ಆ ಸಾರಿನ ಘಮವೇ ಬೇರೆ.. ನಮಗೂ ಸಾರಿನ ಪುಡಿ ಹೇಗೆ ಮಾಡೋದಂತ ಹೇಳಿ‌ಕೊಡಿ. ನಮಗೂ ಸಾರಿನ‌ಪುಡಿ ಕೊಡಿ ಎಂದು ಊಟ ಮುಗಿಸಿ ಅಡುಗೆ ಚಪ್ಪರದ ಬಳಿ ಹುಡುಕಿ ಬಂದು "ಶೇಕ್ ಹ್ಯಾಂಡ್" ಮಾಡಿ ಒಂದು ಅಭಿನಂದನೆ ತಿಳಿಸುತ್ತಾರಲ್ಲ ಆಗ ಅವರಿಗೆ ಆಗುವ ಸಂತೋಷ, ಯಜಮಾನ ಕೊಡುವ ಹಣದಲ್ಲಿಲ್ಲ....ಎಂದು ಅವರೇ ಹಲವು ಬಾರಿ ಹೇಳಿದ್ದರು.

       ಇವರ ರಸಂಪುಡಿ ಸಾಂಬಾರಿನ ಪುಡಿ ನಮ್ಮೂರಿನವರೇ ಆದ ದುಬೈ, ಮುಬೈ, ಬೆಂಗಳೂರು, ಧಾರವಾಡ, ಅಮೇರಿಕಾದ ಆಸ್ಟ್ರೇಲಿಯಾದ ಅನಿವಾಸಿಗಳು ಕೊಂಡೊಯ್ದು ಅಲ್ಲಿಯೂ ಘಮವ ಹರಡಿದೆ. "ಮನುಷ್ಯ ಏನೂ ಕೊಟ್ಟರೂ, ಎಷ್ಟು ಕೊಟ್ಟರೂ ತೃಪ್ತಿ ಇಲ್ಲ ಇನ್ನೂ ಬೇಕು ಎಂದು ಎರಡೂ ಕೈಯಿಂದ ಬಾಚಿಕೊಳ್ಳಲು ನೋಡುತ್ತಾನೆ. ಅದೇ ಹೊಟ್ಟೆ ತುಂಬಾ ಊಟ ಬಡಿಸಿದರೆ ಸಾಕು ಸಾಕು ಎಂದು ಕೈ ಅಡ್ಡ ಹಿಡಿಯುತ್ತಾನೆ. ನಿಜ ತಾನೆ."? ಅಲ್ಲದೇ ಇವರು ಪಾಕ ಪ್ರವೀಣರಾಗಿ ಅನೇಕ ಶಿಷ್ಯರನ್ನು ತಮ್ಮ ವೃತ್ತಿಯಲ್ಲಿ ಮುಂದುವರಿಯಲು ಪ್ರೇರೇಪಣೆ ನೀಡಿದ್ದಾರೆ.

       ಮೂರು ಮುದ್ದಾದ ಹೆಣ್ಣುಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಆಚಾರ ವಿಚಾರಗಳ ನಡುವೆ ಮದುವೆ ಮಾಡಿಸಿ ಮೊಮ್ಮಕ್ಕಳ ಎತ್ತಿ ಆಡಿಸಿದ್ದಾರೆ. ವಿವಾಹವಾದ ಸಂದರ್ಭದಲ್ಲಿ ಕಡುಬಡತನ ಎದುರಿಸಿದ ನಮ್ಮ ತಾಯಿ ಒಂದಷ್ಟು ತ್ಯಾಗ, ಸಹನೆಯ ಪ್ರೀತಿ ಕಾಳಜಿಯ  ಜೀವನ ನಡೆಸಿ ಪತಿಯ ಜೊತೆ ಹೆಜ್ಜೆ ಹಾಕಿ "ಸಂಗಾತಿ ಸಹಭಾಗಿ" ಎಂಬ ಉಕ್ತಿಗೆ ಸಾತ್ ನೀಡಿದ್ದಾರೆ. ಅಲ್ಲದೇ ಇತ್ತೀಚೆಗೆ ತಮ್ಮ ಅರವತ್ತನೇ ವರುಷದ ಷಷ್ಠಾಬ್ದಿ ಪೂರೈಸಿ ಹಿರಿಯ ನಾಗರೀಕರ ಪಟ್ಟಿಗೆ ನಮ್ಮ ತಂದೆಯ ಹೆಸರೂ ಸೇರಿದೆ. ಅವರ ಮಕ್ಕಳಾದ ನಮಗೆಲ್ಲ ಹೆಮ್ಮೆಯಿದೆ. ಕೊಡುಗೈ ದಾನಿ, ಕನಸುಗಳ ಸಾಕಾರಗೊಳಿಸುವತ್ತ ಅವರ ನಡಿಗೆ ಎಲ್ಲವೂ ನಮಗೆ ಸ್ಪೂರ್ತಿ ನೀಡುತ್ತದೆ. ಅವರಂತೆ ಬದುಕಲು, ಅವರ ಹಾದಿಯಲ್ಲಿಯೇ ಸಾಗುತ್ತೇವೆ. 

       ಅಪ್ಪ- ಅಮ್ಮ ನಿಮಗೆ ವೈವಾಹಿಕ ಜೀವನದ ಹಾರ್ದಿಕ ಶುಭಾಶಯಗಳು. ಹಾಗೆಯೇ ನಿಮ್ಮ ಮುಂದಿನ ಜೀವನ ಆಯುರ್- ಆರೋಗ್ಯ ನೆಮ್ಮದಿಯಿಂದ ಕೂಡಿರಲಿ ಎಂದು ಶ್ರೀಕೃಷ್ಣಪರಮಾತ್ಮನಲ್ಲಿ ಪ್ರಾರ್ಥಿಸುವೆ. 

 ಶುಭಹಾರೈಕೆಗಳನ್ನು ಹೇಳಬಯಸುವವರು,

ಶ್ರೀಮತಿ ಚಂದ್ರಿಕಾ (ಶಿಕ್ಷಕಿ) ಮತ್ತು ಶ್ರೀ ರಾಘವೇಂದ್ರ ಬಾಯಿರಿ. ಬಂಡೀಮಠ ಮತ್ತು ಮಕ್ಕಳು

ಶ್ರೀಮತಿ ತುಳಸಿ (ಲೇಖಕಿ) ಮತ್ತು ಶ್ರೀ ನವೀನ್ ಭಟ್. ಕಕ್ಕುಂಜೆ ಮತ್ತು ಮಕ್ಕಳು.

ಕುಮಾರಿ ದೀಪಿಕಾ (ಅಧ್ಯಾಪಕಿ) ಮತ್ತು ಬಂಧುಮಿತ್ರರು.

Add comment