logo

ತಾಯಿಯಾದ ಮೇಲೆ ಆಗುವ ಬದಲಾವಣೆಗಳು by Sindhu Bhargav

ಕಿರುಲೇಖನ : ತಾಯಿಯಾದ ಮೇಲೆ ಆಗುವ ಬದಲಾವಣೆಗಳು

ಹೆಚ್ಚಿನ ಪ್ರಮಾಣದಲ್ಲಿ ನೀವು ಗಮನಿಸಿದಂತೆ ೨೦-೨೪ ವರುಷದೊಳಗೆ ಹೆಣ್ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುವುದನ್ನು. ಕೆಲವರಿಗೆ ಮದುವೆಯ ಬಗ್ಗೆ  ಆಸಕ್ತಿ ಇಲ್ಲದಿದ್ದರೂ ಕೂಡ ಮನೆಯವರ ಒತ್ತಾಯದ ಮೇರೆಗೆ ಮದುವೆಯಾಗುತ್ತಾರೆ. ಕೆಲವರು ಮನೆಯವರ ಜವಾಬ್ದಾರಿ ಕಡಿಮೆ ಮಾಡಲು ಒಪ್ಪುತ್ತಾರೆ. ಕೆಲವರಿಗೆ ಮದುವೆ ಬಗ್ಗೆ ಏನೂ ಯೋಚನೆಯೂ ಇಲ್ಲದಿದ್ದರೂ ಮದುವೆಯಾಗಿರುತ್ತದೆ. ಕೆಲವರಿಗೆ ಒತ್ತಾಯದ ಮದುವೆಯಾಗುತ್ತದೆ. ಇನ್ನು ಮದುವೆ ಎಂದರೆ ಬಂಧನ /ಜೈಲು ಎಂದೆಲ್ಲ ಯೋಚಿಸುವವರೂ ಇದ್ದಾರೆ. ಮದುವೆ ಎಂಬುದು ಎರಡು ಮನೆ ಮನಸ್ಸುಗಳ ಬೆಸೆಯುವ ಕೊಂಡಿ. ಹೊಸತನಕ್ಕೆ ಮನಃಪೂರ್ವಕವಾಗಿ ಒಗ್ಗಿಕೊಳ್ಳಲೇಬೇಕು, ಸಂಭ್ರಮಿಸಬೇಕು, ಖುಷಿಪಡಬೇಕು. 

ಅದಕ್ಕೆ ಹೇಳುವುದು ಆಯಾಯ ಸಮಯದಲ್ಲಿ ಏನೇನು ಆಗಬೇಕೋ ಹಾಗೆ ನಡೆದರೆ ಒಳ್ಳೆಯದೆಂದು.  ಹೆಣ್ಮಕ್ಕಳಿಗೆ ಉದ್ಯೋಗ, ಮದುವೆ, ಗಂಡನ ಜೊತೆಗಿನ ಹೊಸ ಜೀವನ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಹಾಗೆಯೇ ಇವೆಲ್ಲವನ್ನೂ ನಿಭಾಯಿಸಲು ಶಕ್ತರಾಗುವ ಹೊತ್ತಿಗೆ ವರುಷ ೨೬+ ಆಗಿರುತ್ತದೆ. ಆಗ ಎದುರಾಗುವ ಸಮಸ್ಯೆಗಳು ಬೇರೆಯೇ ಇರುತ್ತದೆ. 

ಕೆಲವರಿಗೆ ಅನಿಸುವುದಿದೆ, "ಈಗಿನ ಕಾಲದಲ್ಲೂ ಇಷ್ಟು ಬೇಗ ಮದುವೆ ಮಾಡಿಸೋದಾ..?? ಜಾಬ್ ಗೆ ಹೋಗೋದಿಲ್ವಾ ನಿಮ್ಮ ಸೊಸೆ?!?? ಮನೆಯಲ್ಲೇ ಮಕ್ಕಳ ಸಾಕೊಂಡು ಇದ್ದಾಳಾ?!? " ಎಂದು ಬಾಯಿ ಅಗಲಿಸಿ ಗುಂಡು ಕಣ್ಣು ಮಾಡಿಕೊಂಡು ಕೇಳುತ್ತಾರೆ. ಏನೋ ಅಪರಾಧ ಮಾಡುತ್ತಿರುವಂತೆ, ಅಥವಾ ಅವರಿಗೆ ಮೂರ್ಖರಂತೆ ಕಾಣಿಸುವುದು ಹಾಸ್ಯಾಸ್ಪದ. ತಮ್ಮ ಮೂಲವನ್ನು ಮರೆತು ಈಗಿನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವವರು ಮಾತ್ರವೇ ಈ ರೀತಿ ಕೇಳುವುದು. 

ಬೇಗ ಮದುವೆಯಾದರೆ ಹೆಣ್ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ವೈದ್ಯಕೀಯ ವಲಯವೇ ಹೇಳುತ್ತದೆ. ಒಂದೆರಡು ವರುಷದೊಳಗೆ ಮಗುವಾದರೆ ಮತ್ತೆ ಅವುಗಳ ಲಾಲನೆ ಪಾಲನೆಯಲ್ಲಿ ೧೦ ಹತ್ತು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ನಮ್ಮ ಜೀವಿತದ ಹತ್ತು ವರುಷ ಏನೂ ಅರಿಯದ ಮುಗ್ಧ ಮಕ್ಕಳನ್ನು ಬೆಳೆಸಲು ತ್ಯಾಗ ಮಾಡಬೇಕಾಗುತ್ತದೆ. ಅದೊಂದು ಗ್ರೇಟ್ ಅನುಭವ. ಮಹತ್ವದ ಸಾಧನೆ. ಈಗಿನ ಕಾಲದಲ್ಲಿ ಒಂದು ಸುಸಂಸ್ಕೃತ ವಾತಾವರಣದಲ್ಲಿ ಮಕ್ಕಳ ಬೆಳೆಸುವುದೂ ಅಗತ್ಯವಾಗಿದೆ.

ನಂತರ ೩೪ ವರ್ಷದ ಮೇಲೆ ಕೆಲಸಕ್ಕೆ ಸೇರಬಹುದು. ನಿಮ್ಮ ಜೀವನ ನಿಮಗಾಗಿ ಬದುಕಬಹುದು. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಓದುವುದು ಬರೆಯುವುದು, ಗಂಡ ಆಫೀಸಿಗೆ ಹೋದರೆ ಮಕ್ಕಳು ಶಾಲೆಗೆ ಹೋದರೆ ಮನೆ ಖಾಲಿ ಇರುತ್ತದೆ. ಬೇಸರ ಕಳೆಯಲು ನೀವೂ ಉದ್ಯೋಗಕ್ಕೆ ಸೇರಬಹುದು.. ಒಂದು ೫೫-೬೦ ವರುಷಗಳ ಕಾಲ ದುಡಿಯಬಹುದು.

ಹಾಗಾಗಿ ತಾಳ್ಮೆ ಅಗತ್ಯ. ಎಲ್ಲದಕ್ಕೂ ಅತಿಯಾಗಿ ಯೋಚಿಸದೆ ಮಕ್ಕಳಿಗಾಗಿ ಒಂದಷ್ಟು ವರುಷಗಳು ತ್ಯಾಗ ಮಾಡಬೇಕಾಗುತ್ತದೆ.

ಇನ್ನು ತಾಯಿಯಾದ ಮೇಲೆ ಕಂಡ ಬದಲಾವಣೆಗಳು :

*****************************************

ಪ್ರಥಮವಾಗಿ ಸಮಯದ ಅಭಾವ. ನಮಗೆ ಅಂತ ಸಮಯ ಸಿಗುವುದಿಲ್ಲ. ಅತಿಯಾದ ಕೆಲಸ. ಪುಟ್ಟ ಮಕ್ಕಳು ಅವರಾಗೇ ಏನೂ ಮಾಡುವುದಿಲ್ಲವೆಂದಾಗ ಬೆಳಿಗ್ಗೆ ಏಳಿಸಿ ಹಲ್ಲು ಉಜ್ಜಿಸುವುದರಿಂದ ರಾತ್ರಿ ನೀತಿಕತೆ ಹೇಳಿ ಮಲಗಿಸುವ ತನಕ ಎಲ್ಲವೂ ತಾಯಿಯೇ ಮಾಡಬೇಕು. ಹಗಲು - ರಾತ್ರಿ‌ ನಿದಿರೆ ಬಿಡಬೇಕು. ನಮಗಾಗಿ ಕುಳಿತು ತಿನ್ನುವಷ್ಟು ಸಮಯ ಇರುವುದಿಲ್ಲ. ಗಬಗಬ ತಿಂದು, ಅರೆಬರೆ ತಿಂದು ಮಕ್ಕಳ ನೋಡುವುದಾಗುತ್ತದೆ. ಮಗುವಿಗೆ ತಿನಿಸಿದ ಮೇಲೆ ನಮ್ಮ ಹಸಿವು ಇಂಗಿರುತ್ತದೆ. ಸಮಯ ಕಳೆದು ಹೋಗುವುದೇ ತಿಳಿಯುವುದಿಲ್ಲ. ದಪ್ಪ ಆಗುತ್ತಾರೆ. ವ್ಯಾಯಾಮ ಮಾಡಲು ಸಮಯವಿರುವುದಿಲ್ಲ. ಹಾಡು ಸಿನೆಮಾ ಓದುವುದು ಯಾವುದಕ್ಕೂ ವೈಯಕ್ತಿಕ ಸಮಯ ಸಿಗುವುದಿಲ್ಲ. ಮಕ್ಕಳ ಆರೋಗ್ಯ ಕೆಟ್ಟಾಗ ವೈದ್ಯರ ಬಳಿ ಓಡಿ ಹೋಗಿ ಕಾದು ಔಷಧಿ ಕೊಡಿಸಬೇಕು. ರಾತ್ರಿ ನಿದಿರೆ ಬಿಟ್ಟು ಅವರ ಆರೈಕೆ ಮಾಡಬೇಕು.

ಗಂಡನ ಜೊತೆ ಏಕಾಂತವಾಗಿ ಸಮಯ ಕಳೆಯಲು ಆಗುವುದಿಲ್ಲ. ಅವನಿಗೆ ಬೇಸರವಾದರೆ ನಮಗೂ ಬೇಸರ. ಕೆಲವು ಗಂಡಸರು ಕೊಂಚಕೊಂಚವೇ ಬದಲಾಗುತ್ತ ಹೋಗುತ್ತಾರೆ. ಉದ್ಯೋಗಕ್ಕೆ ಹೋಗುವವರು ಕೆಲವೊಮ್ಮೆ ತಮ್ಮ ವೃತ್ತಿಯನ್ನು ನಿಲ್ಲಿಸಿ ಮಗುವಿನ ಪಾಲನೆಯಲ್ಲಿ ತೊಡಗಬೇಕಾಗುತ್ತದೆ. ಕಾರಣ ಸಹಾಯಕ್ಕೆ ಆಯಾ, ಅಥವಾ ಬೇರೆ ಯಾರೂ ಇರದಿದ್ದಾಗ ಈ ಸಮಸ್ಯೆ ಎದುರಾಗುತ್ತದೆ.

ಮಕ್ಕಳ ಎದುರು ಅಳುವ ಹಾಗಿಲ್ಲ. ಬೇಸರವಾದರೆ ತೋಡಿಕೊಳ್ಳುವ ಹಾಗಿಲ್ಲ. ಓಡೋಡಿ ಬಂದು "ಯಾಕಮ್ಮ ಅಳುವೆ " ಎಂದು ಕೇಳುವರು. ಸದಾ ನಗುತ್ತ ಇರಬೇಕು. ನಮ್ಮ ಮನಸ್ಸಿನ ನೋವನ್ನು ನಾವೇ ಯಾವುದೋ ಮೂಲೆಯಲ್ಲಿ ಮಕ್ಕಳಿಗೆ ಗೊತ್ತಾಗದ ಹಾಗೆ ಅಳಬೇಕು. ಅವರೆದು ಹೇಳುವ ಹಾಗಿಲ್ಲ. ನಕಾರಾತ್ಮಕವಾಗಿ ಯೋಚಿಸುವ ಹಾಗಿಲ್ಲ,ಮಾತನಾಡುವ ಹಾಗಿಲ್ಲ. ಸಮಾಧಾನ ಮಾಡಿಕೊಳ್ಳಬೇಕು. ಹೊಂದಿಕೊಂಡು ಹೋಗಬೇಕು. ಸಹಿಸಿಕೊಳ್ಳಬೇಕು. ಕೆಲವರಿಗೆ ಗಂಡ ಸರಿಯಿಲ್ಲದಿದ್ದರೆ ಕೂಡ ಮಕ್ಕಳ ಎದುರು ದೂರು ಹೇಳಬಾರದು. ಮಕ್ಕಳ ಎದುರೇ ಗಂಡನೊಂದಿಗೆ ಜಗಳ ಮಾಡಬಾರದು. ಗಂಡನ ಬಗ್ಗೆ ಕೇವಲ ವಾಗಿ ಮಾತನಾಡಬಾರದು. ಅವರಿಗೆ ಕೂಡ ತಂದೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಯಲು ಕಾರಣವಾದೀತು. ಅವರು ಕೂಡ ತಂದೆಗೆ  ಗೌರವ ಕೊಡದಿರಬಹುದು. 

ಬದುಕು ಏನೆಲ್ಲ ಕಲಿಸಿಕೊಡುತ್ತದೆ. ಮೊದಲಿಗೆ ಸಹನೆ ತ್ಯಾಗ ಒಂದೇ ನಾಣ್ಯದ ಎರಡು ಮುಖಗಳಂತೆ. ಹೆಣ್ಣಿಗೆ ಅದೇ ಭೂಷಣ. ತಾಯಿಯಾಗಿ ಮಕ್ಕಳಿಗೆ ಓದಿಸುವುದು ಬರೆಯಲು ಕಲಿಸಿಕೊಡಬೇಕು. ಸ್ನೇಹಿತರ ಜೊತೆಗೆ ಹೇಗೆ ಸ್ನೇಹದಿಂದ ಇರಬೇಕು ಎಂಬುದೂ ತಿಳಿಸಿಕೊಡಬೇಕು. ಹೆದರದೇ ಧೈರ್ಯದಿಂದ ಇರಲು , ಮಾತನಾಡಲು ಕಲಿಸಿಕೊಡಬೇಕು. ನೀತಿ ಕತೆಗಳನ್ನು ಹೇಳಿಕೊಡಬೇಕು.

ಅಮ್ಮ - ಹೇಗೆ ಗ್ರೇಟ್ ಎಲ್ಲರಿಗಿಂತ ಒಂದು ಹಂತ ಮೇಲೆಯೇ ಇರುವುದು ಎಂದು ಯೋಚಿಸುವುದಕ್ಕಿಂತ ಹಾಗೆಯೇ ಬಾಳಿ ತೋರಿಸಬೇಕು. ಮಕ್ಕಳಿಗೆ ಅಮ್ಮನೇ ಸರ್ವಸ್ವ. ಅವಳನ್ನು ನೋಡುತ್ತಲೇ ಅವಳ ಒಡನಾಟದಲ್ಲೇ ಬೆಳೆಯುತ್ತಾರೆ. "ಅಮ್ಮ... ಅಮ್ಮಾ..." ಎಂದು ಕಾಲಿಗೆ ಸುತ್ತು ಹಾಕಿಕೊಂಡಿರುತ್ತಾರೆ. ಪ್ರತಿಯೊಂದಕ್ಕೂ ಅಮ್ಮನನ್ನೇ ಅವಲಂಭಿಸಿಕೊಂಡಿರುತ್ತಾರೆ. ಅಮ್ಮನಿಲ್ಲದ ಮನೆಯೇ ಶೂನ್ಯ ವಾತಾವರಣ.

ಅತಿಯಾಗಿ ನಗಲೂ ಹಾಸ್ಯ ಮಾಡಿಕೊಂಡು ಚಿಲ್ ಔಟ್ ಮಾಡಲೂ ಸಾಧ್ಯವಾಗದು. ಅಮ್ಮ ಯಾವಾಗಲೂ ಎಲ್ಲವನ್ನೂ ತ್ಯಜಿಸುವವಳು. ಮಮತೆಯ ಸ್ಥಾನವನ್ನು ತುಂಬಿಸುವವಳು. ಆತ್ಮಬಲ, ಶಕ್ತಿ , ಧೈರ್ಯ ನೀಡುವವಳು. ಅಮ್ಮನ ಸ್ಥಾನ ಪಡೆದ ಮೇಲೆ ಏನೆಲ್ಲ ಅನುಭವವಾಗುವುದು. ಇದು ನಿಜಕ್ಕೂ ಗ್ರೇಟ್.

ಧನ್ಯವಾದಗಳು.

ಸಿಂಧು ಭಾರ್ಗವ ಬೆಂಗಳೂರು

(ಲೇಖಕಿ)

Add comment