logo

ಹೊಯ್ !! ನಮ್ಮ ಮನಿ ಹೊಸ್ತಿಗ್ ಬನಿ !

ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಅಂದ ಕೂಡಲೇ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಒಂದು ರೀತಿಯ ಸಂಭ್ರಮವೋ ಸಂಭ್ರಮ !! ಈ ಎರಡು ತಿಂಗಳು ನಮ್ಮ ಹಿಂದು ಭಾಂದವರಿಗೆ ಹಬ್ಬದ ಮೇಲೊಂದು ಹಬ್ಬದ ಸಡಗರ. ಗಣೇಶ ಚತುರ್ಥಿ, ಗೌರಿ ಹಬ್ಬ, ದಸರಾ, ದೀಪಾವಳಿ ಹಬ್ಬಗಳ ಸುಂಧರ ವಾತಾವರಣ. ಕ್ರೈಸ್ತ ಭಾಂದವರಿಗೂ ಸಪ್ಟೆಂಬರ್ ತಿಂಗಳಿನ 8 ನೇ ತಾರೀಕು ದೊಡ್ಡ ಸಂಭ್ರಮದ ದಿನ. ಮಾನವಕುಲಗೋಸ್ಕರ ಜೀವತೆತ್ತ ಯೆಸು ಕ್ರೀಸ್ತರ ತಾಯಿ ಮೇರಿಯ ಜನ್ಮ ದಿನ. ಈ ತಿಂಗಳಲ್ಲಿ ನಾವು ಸಮಸ್ತ  ಸ್ತ್ರೀಕುಲ ಮತ್ತು ಅವರ ತಾಯ್ನಾತನದ ಭಾಗ್ಯವನ್ನು ಸ್ಮರಿಸುತ್ತೇವೆ.

ಸಪ್ಟೆಂಬರ್ 8, ಮೇರಿ ಮಾತೆಯ ಜನ್ಮ ದಿನದ ಹಬ್ಬ ಪ್ರಪಂಚದ ಎಲ್ಲಾ ಕಡೆಯಲ್ಲಿ ಆಚರಣೆಯಲ್ಲಿದ್ದು, ಅದರಲ್ಲಿಯೂ ಭಾರತದಲ್ಲಿ ಜಾಸ್ತಿಯಾಗಿ ಗೋವಾ ಮತ್ತು ಕರ್ನಾಟಕದ ಕರಾವಳಿ ಭಾಗದಿಂದ ಹಿಡಿದು ಕೇರಳದ ಗಡಿ ಭಾಗದವರೆಗೆ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬದ ಪರ್ಯಾಯ 9 ದಿನಗಳ ನೊವೆನಾ, ಪೂಜೆ, ಪ್ರಾರ್ಥನೆ ಮತ್ತು ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸುತ್ತೇವೆ. ಮೇರಿ ಮಾತೆಗೆ ಹೂವುಗಳೆಂದರೆ ತುಂಬಾ ಇಷ್ಟ. ಈ 9 ದಿನಗಳಲ್ಲಿ ಮಕ್ಕಳು ಬೆಳಿಗ್ಗೆ ಇಗರ್ಜಿಗೆ ಹೋಗಿ ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಲು ಆಸಕ್ತಿಯಿಂದಿರುತ್ತಾರೆ.

ಮೇರಿ ಮಾತೆಯ ಜನ್ಮ ದಿನದ ಹಬ್ಬವನ್ನು ಕೊಂಕಣಿಯಲ್ಲಿ "ಮೊಂತಿ ಫೆಸ್ತ್" ಅಂತಲೂ ಮತ್ತು ಆ ದಿನದ ಊಟಕ್ಕೆ "ನವೆ ಜೆವಾಣ್" ಅಂತ ಹೇಳಲಾಗುತ್ತದೆ.  ಇದಕ್ಕೆ  ಕುಂದಾಪುರ ಕನ್ನಡದಲ್ಲಿ ನಾವೆಲ್ಲರೂ "ಹೊಸ್ತ್ ಊಟ" ಅಂತ ಸಹಾ ಕರೆಯುತ್ತೇವೆ. ಕರ್ನಾಟಕದಲ್ಲಿ ನಮ್ಮ ಹಿಂದಿನ ಚರಿತ್ರೆ ಪ್ರಕಾರ  ಈ "ಹೊಸ್ತ್ ಊಟದ ಪದ್ದತಿ" ಸುಮಾರು 250 ವರ್ಷಗಳ ಹಿಂದೆ ಗೋವಾದ ಪಾದ್ರಿ ಜೋಕಿಮ್ ಮಿರಾಂದಾರವರು ಪರಾಂಗಿಪೇಟೆಯಲ್ಲಿರುವ ನೇತ್ರಾವತಿ ನದಿ ದಂಡೆಯ ಮೇಲಿರುವ ಗುಡ್ಡದಲ್ಲಿ ಈ ಆಚರಣೆಯನ್ನು ಶುರುಮಾಡಿದರು. ಈ ಪ್ರಾಚೀನ ಸ್ಥಳಕ್ಕೆ "ಮೊಂತೆ ಮಾರಿಯಾನೊ" ಅಂತಾ ಕರೆಯುತ್ತಾರೆ. 

ಗೋವಾ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಬಹುತೇಕ ಕ್ರೈಸ್ತ ಭಾಂದವರು ಕ್ರಷಿಯನ್ನು ಅವಲಂಬಿಸಿರುವುದರಿ0ದ ಅವರವರ ಹೊಲದಲ್ಲಿ ಬೆಳೆದ ಪ್ರಥಮ ಭತ್ತದ ಬೆಳೆ, ಹಣ್ಣು ಹಂಪಲು, ತರಕಾರಿಯನ್ನು ಈ ಹಬ್ಬದ ದಿನದಂದು ದೇವರಿಗೆ ಅರ್ಪಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುತ್ತಾರೆ. ದೇವರು ರಚಿಸಿದ ಈ ಭೂಮಿಯನ್ನು "ನಮ್ಮ ತಾಯಿ"ಯೆಂದು ಗೌರವಿಸುತ್ತೇವೆ.  ಹೀಗೆ ದೇವರಿಗೆ ಅರ್ಪಿಸಿ ಆರ್ಶಿವಾದಿಸಿದ ಭತ್ತವನ್ನು ತಮ್ಮ ಮನೆಗೆ ತಂದು ಕುಟುಂಬದ ಎಲ್ಲಾ ಸದಸ್ಯರೊಂದಿಗೆ, ನೆರೆಮನೆಯವರ ಹಾಗೂ ಮಿತ್ರರ ಜೊತೆಯಲ್ಲಿ ಸೌರ್ಹಾದದಿಂದ ಊಟ ಮಾಡುತ್ತೇವೆ. ಹೀಗೆ ಆರ್ಶಿವಾದಿಸಿದ ಭತ್ತವನ್ನು ಪರದೇಶದಲ್ಲಿರುವ ತಮ್ಮ ಕುಟುಂಬದ ಸದಸ್ಯರಿಗೂ ಕಳುಹಿಸಿಕೊಡಲಾಗುತ್ತದೆ. ಈ ಹಬ್ಬದ ದಿನದಂದು ಕಡಿಮೆ ಅಂದರೂ 11 ಬಗೆಯ ಪಲ್ಯಗಳು, ಮೀನಿನ ಪದಾರ್ಥ ಮತ್ತು  ರುಚಿಯಾದ ಪಾಯಸದ ಜೊತೆಗೆ ಊಟ ಮಾಡಿ ತಮ್ಮ  ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ.  ಗೋವಾ ಮತ್ತು ಕರ್ನಾಟಕದ ಕ್ರೈಸ್ತ ಭಾಂದವರು ಪ್ರಪಂಚದ ಯಾವ ಮೂಲೆಯಲ್ಲಿ ವಾಸಿಸುತಿದ್ದರೂ, ಈ "ಮೊಂತಿ ಫೆಸ್ತ್" (ಹೊಸ್ತ್ ಹಬ್ಬ) ಹಬ್ಬವನ್ನು  ತಮ್ಮ ಊರಿನ ಸಂಪ್ರದಾಯದ ಪ್ರಕಾರ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಇದರಿಂದ ನಮ್ಮ ಊರು ಮತ್ತು ಊರಿನ ಸಂಸ್ಕ್ರತಿಯೂ ಸಹ ಇಡಿ ಪ್ರಪಂಚದಲ್ಲಿ ಪ್ರಸಿದ್ಧಿಯಾಗಿರುವುದರಲ್ಲಿ ಎರಡು ಮಾತಿಲ್ಲ..........  

ಸುಮಾರು 22 ವರುಷಗಳಿಂದ ನನಗೆ ಮಾತ್ರ ಈ ಪವಿತ್ರ ಹಬ್ಬವನ್ನು ಊರಿನಲ್ಲಿ ಕುಟುಂಬದ ಜೊತೆಯಲ್ಲಿ ಆಚರಿಸಲು ಅವಕಾಶ ಸಿಗಲೇ ಇಲ್ಲ !!  ಇಲ್ಲಿ ಪರದೇಶದಲ್ಲಿ ಸಪ್ಟೆಂಬರ್ 8 ರಂದು ಹಬ್ಬದ ಪೂಜೆ ಸಂಭ್ರಮದಲ್ಲಿ ಭಾಗಿಯಾಗುವಾಗ  ನಾನೇನೊ  ಊರಿನಲ್ಲೇ ಇದ್ದೇನೆ ಎನ್ನುವ ಅನುಭವ !  ಈ ಹಬ್ಬವನ್ನು ತಮ್ಮ ಬಾಲ್ಯದ ದಿನಗಳಲ್ಲಿ ಆಚರಿಸಿದ ರೀತಿಯನ್ನು ನೆನಪಿಸಿದರೆ ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ.  ಒಂಬತ್ತು ದಿನಗಳವರೆಗೆ ಹೂವುಗಳನ್ನು ಅರ್ಪಿಸಲಿಕ್ಕೆ ಎಲ್ಲಾ ಕಡೆಯಲ್ಲಿ ಹೋಗಿ, ಸಾಯಂಕಾಲ ಮತ್ತು ಬೆಳಗಿನ ಜಾವದಲ್ಲಿ, ಗಾಳಿ ಮಳೆ ಲೆಕ್ಕಿಸದೆ ನಾನಾ ತರಹದ ಹೂವುಗಳನ್ನು ಸಂಗ್ರಹಿಸುತ್ತಿದ್ದೇವು. ಎಲ್ಲಾಕ್ಕಿಂತ ಜಾಸ್ತಿಯಾಗಿ ಹಬ್ಬದ ಕೊನೆಯ ದಿನದಂದು ನಮಗೆ ಹೂವಿನ ಸಂಖ್ಯೆ ಹೆಚ್ಚಿಸಿ ದೊಡ್ಡ ದೊಡ್ಡ ಪಾತ್ರೆ ಅಥವಾ ಬುಟ್ಟಿಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವು. ಯಾಕೆಂದರೆ ಆ ದಿನದಂದು ಮೇರಿ ಮಾತೆಯನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೂವುಗಳನ್ನು ಅರ್ಪಿಸುತ್ತೇವೆ. ನಮ್ಮ ಬಾರ್ಕೂರು ಇಗರ್ಜಿಯಲ್ಲಿ ಮೊದಲಿನಿಂದ ಬಂದ ಸಂಪ್ರದಾಯದ ಪ್ರಕಾರ, ಪ್ರತಿ ವರ್ಷ  ಆ ದಿನದಂದು ಮೇರಿ ಮಾತೆಯ ಮೂರ್ತಿಯನ್ನು ಶ್ರೀ ಜೇಮ್ಸ್ ಮೆಂಡೋನ್ಸಾ ಮತ್ತು ಶ್ರೀಮತಿ ರೋಜಿ ಮೆಂಡೋನ್ಸಾ ಕುಟುಂಬದ ಮನೆಯವರೆಗೆ ತೆಗೆದುಕೊಂಡು, ಭತ್ತದ ಬೆಳೆಯನ್ನು ಆರ್ಶಿವಾದಿಸಿ ವಾಪಾಸ್ ಮೆರವಣಿಗೆಯಲ್ಲಿ ಭಕ್ತಿ ಗೀತೆ, ಗಾಯಾನದಲ್ಲಿ, ಹೂವುಗಳನ್ನು ಅರ್ಪಿಸುವುದರೊಂದಿಗೆ, ಇಗರ್ಜಿಗೆ ಬಂದು ಮುಖ್ಯ ಪೂಜೆಯನ್ನು ಮುಗಿಸಿದ ನಂತರ,  ಹೂವುಗಳನ್ನು ತಂದು ಅರ್ಪಿಸಿದ ಮಕ್ಕಳಿಗೆ ವಿತರಸಿದ ಕಬ್ಬನ್ನು ತೆಗೆದುಕೊಂಡು ಸಂತಸದೊಂದಿಗೆ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದೇವು.

ಮನೆಯಲ್ಲಿ ಬಂದ ಕೂಡಲೆ ನಮ್ಮ ಒಂದು ಆತುರದ ನೋಟ ಮನೆಯ ಮೂಲೆ ಮೂಲೆಗಳಲ್ಲಿ ಬೀಳುತ್ತಿತ್ತು... ನಮ್ಮ ನೆರೆಮನೆಯವರು ಮತ್ತು ಮಿತ್ರರು ಹೊಸ್ತಿಗೆ ಬಂದಿದ್ದಾರೆ ಅಂತ ನೋಡುವ ಹಂಬಲ.  ಹಬ್ಬದ ಮೊದಲೆರಡು ದಿನಗಳಿಂದ "ತಂದೆಯವರ" ಕರೆಯೋಲೆ ಹೋಗುತ್ತಿತ್ತು... "ಹೊಯ್ !! ನಮ್ಮ ಮನಿ ಹೊಸ್ತಿಗ್ ಬನ್ನಿ.. ಬಾರದೆ ಆಯ್ಕಾಂಡ್ ಬೇಡಿ". ಅದು ಪ್ರೀತಿ ವಾತ್ಸಲ್ಯ ಮತ್ತು ಸೌರ್ಹಾದದ  ಆಮ0ತ್ರಣವಾಗಿರುತ್ತಿತ್ತು . ಒಂದು ವೇಳೆ ಕೆಲವು ಮನೆಯವರ ಹಿರಿಯವರು ಬಾರದೆ ಮಕ್ಕಳನ್ನು ಕಳುಹಿಸಿದ್ದಲ್ಲಿ  "ಮಗ ಸಾಯಂಕಾಲ ಒಂದ್ ಗಳಿಗಿ ಅಪ್ಪ ಅಮ್ಮನ ಬಪ್ಪುಕ್ ಹೇಳ್, ಒಂದ್ ಮುಷ್ಟಿ ಉಂಡ್ಕಂಡ್ ಹೊಪುಕ್ ಹೇಳ್" ಅಂತಾ ಹೇಳುವರು.  ಇಲ್ಲದಿದ್ದರೆ ಆ ದಿನ ನಮ್ಮ ಅಪ್ಪ ಅಮ್ಮನಿಗೆ ನಿದ್ರೆ ಬರುವುದಿಲ್ಲ ಇದ್ದಿತು..ಮನೆಯಲ್ಲಿ ಆ ದಿನ ಹೊಟ್ಟೆ ತುಂಬಾ ತಿನ್ನುವಷ್ಟು ತರಕಾರಿ,  ತಾಜ ಮಿನಿನ ಪದಾರ್ಥ ಮತ್ತು ಅಮ್ಮನ ಕೈಯಿಂದ ಮಾಡಿದ ರುಚಿಯಾದ ಪಾಯಾಸ. ಅದರಲ್ಲಿಯೂ ವಿಶೇಷವಾಗಿ "ಪತ್ರಾಡೆ" ಮತ್ತು ಆಮಟೆ ಕಾಯಿ ಹಾಕಿ ಮಾಡಿದ "ಕೆಸ ಎಲೆಯ ಪಲ್ಯ"..... ಅಹಾ!! ಏಷ್ಟು ರುಚಿಕರ !.... ಅದು ತಿಂದವರಿಗೆ ಮಾತ್ರ ಗೊತ್ತು ಅದರ ರುಚಿ ಮತ್ತು ತಯಾರಿ ಮಾಡಿದವರಿಗೆ ಮಾತ್ರ ಗೊತ್ತು ಅದರ ಕಷ್ಟ !!  ಈ ಹಬ್ಬದ ಊಟದ ತಯಾರಿಗೊಸ್ಕರ ಮನೆಯವರು ಬೆಳಿಗ್ಗೆ 3 ಗಂಟೆಗೆ ಎದ್ದು ಅಡುಗೆ ಕೆಲಸದಲ್ಲಿ ತೊಡಗುತಿದ್ದರು. ಅವರ ಜೊತೆಗೆ ನೆರೆಮನೆಯವರು ಸಹ ಸಹಾಯಕ್ಕೆ ಬರುತ್ತಿದ್ದರು. ಆ ದಿನದ ವಾತಾವರಣವನ್ನು ಬಣ್ಣಿಸಲು ಅಸಾಧ್ಯ. ಇದೇ ರೀತಿ ಎಲ್ಲಾ ಕ್ರೈಸ್ತ ಭಾಂದವರು ಈ ಹಬ್ಬವನ್ನು ಆಚರಿಸುತ್ತಾರೆ ಮತ್ತು ಇದುವರೆಗೂ ಈ ಸಂಪ್ರದಾಯ ಆಚರಣೆಯಲ್ಲಿದೆ.

ಆಧುನಿಕ ಕಾಲದಲ್ಲಿ ಸಮಯದ ಅಭಾವ ಮತ್ತು ಮನೆಯಲ್ಲಿ ಕುಟುಂಬದ ಸದಸ್ಯರು ಕಡಿಮೆಯಿರುವುದರಿಂದ ಈ "ಹೊಸ್ತ್ ಊಟದ" ವೈಶಿಷ್ಟತೆ ಕಡಿಮೆಯಾಗುತ್ತಾ ಹೋಗಿದೆ. ಮೊದಲಿನ ಹಾಗೆ 11 ಬಗೆಯ ತರಕಾರಿ ಪಲ್ಯಗಳು ಕಡಿಮೆಯಾಗಿ ಈಗ ಸಂದರ್ಭದ ಪ್ರಕಾರ, ಅವರವರ ಅನುಕೂಲಕ್ಕೆ ತಕ್ಕಂತೆ ಆಚರಿಸಿತ್ತಾರೆ. ಪತ್ರಾಡೆ ಮತ್ತು ಕೆಸ ಎಲೆಯ ಪಲ್ಯವಂತು ಮಾಯಾವಾಗಿದೆ. ಇದನ್ನೆಲ್ಲ ಈಗ ನಾವು ಪ್ರತೀ ವರ್ಷ ಈ ಹಬ್ಬ ಬರುವಾಗ ಪೇಸ್ ಬುಕ್ಕಲ್ಲೊ, ಅಥವಾ ಪೇಪರಿನಲ್ಲೊ, ಟಿವಿಯಲ್ಲೊ ಅದರ ಪೋಟೊಗಳನ್ನು ನೋಡಿ ಆನಂದಿಸುವ ಪರಿಸ್ಥಿತಿ. ಪರ ಊರಿನಿಂದ ಯಾರದರೂ ಕರೆ ಮಾಡಿ ಹಬ್ಬದ ಶುಭಾಶಯಗಳನ್ನು ಎಕ್ಸಚೆಂಜ್ ಮಾಡುವಾಗ, ಪತ್ರಾಡೆ ಮಾಡಿದ್ದೀರಾ ..ಅಂತಾ ಕೇಳುವಾಗ.. .. "ಇಲ್ಲಾ ಮಗ ..ಯಾರು ಮಾಡುದ್ ಅದನ್ನಾ....ಪುರ್ಸತ್ ಸಿಗುದಿಲ್ಲೆ ಮತ್ತ್ ಜೀವಕ್ಕೂ ಎಂತಾ ಯಾಡುದಿಲ್ಲಾ" ಅನ್ನುವಾ ಉತ್ತರದಿಂದ ಪತ್ರಾಡೆ ಪಲ್ಯದ ವೀಶೆಷತೆ ಅಲ್ಲಿಯೇ ಮುಗಿದು ಹೋಗುತ್ತದೆ. ಹೌದು ! ಹಿರಿಯರು ಮಾಡಿದ ಪತ್ರಾಡೆ ತಿಂದು ತಿಂದು ಈಗ ಕಿರಿಯರ ಬಾರಿ ಬರುವಾಗ ಅದಲ್ಲೆವೂ ಬರಿ ನೆನಪಲ್ಲಿ ಮಾತ್ರ ಉಳಿದಿರುತ್ತದೆ .. ಯಾರಿಗೂ ದೂರಿ ಏನು ಪ್ರಯೋಜನವಿಲ್ಲ... "ಕಾಲಕ್ಕೆ ತಕ್ಕಂತೆ ಕೋಲ" ಅನ್ನುವ ಹಾಗೇ ಕೆಲವೊಂದು ಹಿಂದಿನ ಸಂಪ್ರದಾಯಗಳು ಬದಲಾಯಿಸಲ್ಪಡುತ್ತವೆ.

ಆದರೂ ಮೇರಿ ಮಾತೆಯ ಮೇಲಿರುವ ಭಕ್ತಿ, ಹಬ್ಬದ ಆಚರಣೆ ಎಲ್ಲಾ ಭಕ್ತರಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಈ ಹಬ್ಬದ ಸಂಭ್ರಮ ಎಲ್ಲರ ಮನೆ ಮಾತಾಗಿದೆ. ಹೇಗೆ ನಮ್ಮ ನೆರೆಹೊರೆಯ ಕೇರಳ ರಾಜ್ಯದವರು ಪ್ರಪಂಚದ ಮೂಲೆ ಮೂಲೆಯಲ್ಲಿ ಅವರ "ಓನಮ್" ಹಬ್ಬವನ್ನು ಎಲ್ಲರೂ ಒಟ್ಟುಗೂಡಿ ಆಚರಿಸುತ್ತಾರೋ, ಅದೇ ರೀತಿ ಮತ್ತು ಅದಕ್ಕಿಂತಲೂ ಜಾಸ್ತಿ ವೈಶಿಷ್ಟತೆಯಲ್ಲಿ ನಮ್ಮ ಮೇರಿ ಮಾತೆಯ ಜನ್ಮ ದಿನವನ್ನು "ಹೊಸ್ತ್ ಊಟದ" ಮೂಲಕ ಎಲ್ಲರೂ ಸಹಭಾಗಿಯಾಗಿ ಆಚರಿಸುತ್ತಾರೆ. ಖುಷಿ ಕೊಡುವ ವಿಷಯವೇನಂದರೆ ಈ ಹಬ್ಬದ ಆಚರಣೆಯ ಸಂಪ್ರದಾಯ ಪರ ಊರಿನಲ್ಲಿ ಸಹಾ ಹಾಗೆಯೇ ಉಳಿದಿದೆ.. ಉದಾಹರಣೆಗೆ ನಾವಿರುವ ದೋಹಾ ಖಟಾರ್ ದೇಶದಲ್ಲಿ ಈ ಆಚರಣೆಯನ್ನು ನಾವು ಕಣ್ಣಾರೆ ನೋಡುತ್ತೇವೆ ಮತ್ತು ಭಾಗವಹಿಸುತ್ತೇವೆ. ಹಾಗೆಯೇ ಉಳಿದ ದೇಶದಲ್ಲಿಯ ಹಬ್ಬದ ಸಂಭ್ರಮವನ್ನು ಇಂಟರ್ ನೆಟ್ , ಫೇಸ್ ಬುಕ್ಕ್ , ಟಿವಿಗಳ ಮುಕಾಂತರ ತಿಳಿಯುತ್ತೇವೆ. ಏನೇ ಆಗಲಿ, ಈ ಹಬ್ಬದ ಆಚರಣೆ ಇದೇ ರೀತಿ ಮುಂದುವರೆಯಲಿ, ಮೇರಿ ಮಾತೆಯ ಆರ್ಶಿವಾದ ನಮ್ಮೆಲ್ಲಾರ ಮೇಲೆ ಸದಾಕಾಲವಿರಲಿ.... ನಮ್ಮೆಲ್ಲರನ್ನು ಎಲ್ಲಾ ಸಂಕಷ್ಟದಿಂದ ಕಾಪಾಡಲಿ....ಎಲ್ಲರ ಕುಟುಂಬಗಳು ಒಟ್ಟುಗೂಡಲಿ ಮತ್ತು ಸಂತಸದ ಜೀವನ ನಡೆಸಲಿ ಎಂದು ಬೇಡುವಾ.......

ಇದಾದ ನ0ತರ ನಮ್ಮ ಹಿಂದೂ ಭಾಂದವರು ಸಹಾ "ಹೊಸ್ತ್" ಆಚರಿಸುತ್ತಾರೆ. ಅವರು ಸಹಾ ನಮ್ಮೆಲ್ಲರನ್ನೂ "ಹೊಯ್!! ನಾಳಿಗ್ ನಮ್ಮ
ಮನಿ ಹೊಸ್ತ್, ಹೊಸ್ತಿಗ್ ಬನಿ ಆಯಿತಾ" ಅ0ತಾ ಪ್ರೀತಿಯಿಂದ ಕರೆಯುತ್ತಾರೆ. ಹೀಗೆಯೇ ಈ ರೀತಿಯ ಪ್ರೀತಿ ವಾತ್ಸಲ್ಯ ಪ್ರತಿ ವರ್ಷ ಮುಂದುವರೆಯಲಿ, "ಹೊಯ್ !! ನಮ್ಮ ಮನಿ ಹೊಸ್ತಿಗ್ ಬನಿ" ಅನ್ನುವ ಕರೆಯೋಲೆ ಸಾಗುತ್ತ ಹೋಗಲಿ............

ಜೋಸೆಫ್ ಫೆರ್ನಾಂಡಿಸ್, ಮೂಡಹಡು, ದೋಹಾ ಖಟಾರ್ 


Add comment