logo

Innadaroo Echchetthukollona, article by Chandrika R Baiyiri

ಶಿಕ್ಷಕರು ಮತ್ತು ಲೇಖಕರು ಆಗಿರುವ ಚಂದ್ರಿಕಾ ಆರ್ ಬಾಯಿರಿ ಬಾರಕೂರಿನ ಹೇರಾಡಿ ಗ್ರಾಮದ ಚಂಡೆ ನರಸಿಂಹ ಭಟ್ ಅವರ ಮಗಳು. ಗಂಡನ ಮನೆ ಬಂಡೀಮಠ . ವಿದ್ಯಾಭ್ಯಾಸ  ಎನ್. ಜೆ. ಸಿ ಬಾರಕೂರಲ್ಲಿ ಪಿಯುಸಿ ಮುಗಿಸಿ  ಕೆ.ಯು.ಟಿ.ಟಿ. ಕೊಕ್ಕರ್ಣೆಯಲ್ಲಿ ಡಿ.ಎಡ್ ಪದವಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ. ಕಳೆದ ಹದಿಮೂರು ವರ್ಷದಿಂದ ಬೆಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ. 


ಇನ್ನಾದರೂ ಎಚ್ಚೆತ್ತುಕೊಳ್ಳೋಣ....ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಆದರೆ ಸಾಕು, ಅಪಾರ್ಟ್ ಮೆಂಟ್ ಮಕ್ಕಳೆಲ್ಲಾ ಮನೆಯಿಂದ ಹೊರಗಡೆ ಬಂದು ಆಟ ಆಡುತ್ತಿದ್ದರು. ಕಾರಿಡಾರ್ ತುಂಬಾ ಮಕ್ಕಳದ್ದೇ ಹೆಜ್ಜೆ ಸಪ್ಪಳ. ಕೂಗುವುದು, ಕಿರುಚುವುದು ವೇಗವಾಗಿ ಸೈಕಲ್ ಸವಾರಿ ಮಾಡುವುದು ಅಬ್ಬಬ್ಬಾ! ಎಲ್ಲಿ ಬೀಳ್ತಾರೋ ಏನಾಗುತ್ತೋ ಎನ್ನುವ ಭಯ. ಎಷ್ಟೋ ಬಾರಿ,


"ಈ ಮಕ್ಕಳು ಕೆಳಗಡೆ ಹೋಗಿ ಆಟವಾಡಬಾರದೇ? ಎಷ್ಟು ಗದ್ದಲ ಮಾಡ್ತಾರೆ" ಅಂತ ಮನಸ್ಸಲ್ಲೇ ಬೈಯುತ್ತಿದ್ದೆ. 


ನಮ್ಮ ಅಪಾರ್ಟ್ಮೆಂಟ್ ಅಲ್ಲಿ ನಾನು ಯಾರ ಜೊತೆಗೂ ಸ್ನೇಹ ಬೆಳೆಸಿಲ್ಲ. ಯಾರ ಹತ್ತಿರವೂ ಗಂಟೆಗಟ್ಟಲೆ ನಿಂತು ಹರಟೆ ಹೊಡೆದದ್ದು ನೆನಪೇ ಇಲ್ಲ. ಜಸ್ಟ್ ಹಾಯ್ ಬಾಯ್ ಅಷ್ಟೇ. ಹಾಗಂತ ನನಗೆ ಯಾರ ಮೇಲೂ ದ್ವೇಷವೂ ಇಲ್ಲ, ಅಹಂಕಾರವೂ ಇಲ್ಲ. ಶಾಲೆಯಲ್ಲಿ ಮಕ್ಕಳ ಮುಂದೆ ದಿನವಿಡೀ ನಿಂತು ಪಾಠ ಮಾಡುವುದೇ ನಮ್ಮ ಕಾಯಕವಾಗಿದ್ದರಿಂದ ಮನೆಗೆ ಬಂದಾಗ ಮೌನವೇ ಹಿತವೆನಿಸುತ್ತಿತ್ತು. ನಿತ್ಯವೂ ಶಾಲೆಯಲ್ಲಿ ಮಕ್ಕಳ ಗಲಾಟೆ ಕೇಳಿ ಕೇಳಿ ಸ್ವಲ್ಪ ಶಾಂತವಾಗಿದ್ದರೆ ಸಾಕಪ್ಪ ಅಂತ ಅನ್ನಿಸುತ್ತಿತ್ತು.


"ತಲೆ ಸಿಡಿಯುತ್ತಿದೆ, ನನ್ನನ್ನು ಮಾತನಾಡಿಸಬೇಡಿ" 

ಅಂತ ಹೇಳಿ ನನ್ನ ಮಕ್ಕಳನ್ನು ಗದರಿಸುತ್ತಿದ್ದೆ.


ಆದರೆ ಇಂದೇಕೋ ನೀರಸ ಮೌನ. ಕಾರಿಡಾರ್ ಅಲ್ಲಿ ಗೌಜು ಗದ್ದಲವಿಲ್ಲ. ಮಕ್ಕಳ ಹೆಜ್ಜೆ ಸಪ್ಪಳವಿಲ್ಲ. ಹೆಂಗಸರ ಕಿಲಕಿಲ ನಗು, ಗುಸುಗುಸು ಮಾತಿನ ಸದ್ದಿಲ್ಲ. ವಾಕಿಂಗ್ ಹೋಗುವ ಲಲನೆಯರ ಸುಳಿವೇ ಇಲ್ಲ.ನಾನು ಕೂಡ ಮನೆಯಿಂದ ಹೊರಗಡೆ ಹೋಗದೇ ಒಂದು ವಾರ ಮೇಲೆ ಆಯಿತು.


ಅದೇ ಹಳ್ಳಿಯಲ್ಲಿದ್ದರೆ ಮನೆಯ ಒಳಗಡೆ ಬರುವುದೇ ಅಪರೂಪ. ಕೇವಲ ಊಟ, ತಿಂಡಿ, ನಿದ್ದೆಗೆ ಮಾತ್ರ. ತೋಟದ ಕೆಲಸ, ಹಟ್ಟಿಯ ಕೆಲಸವೆಂದು ಯಾವಾಗಲೂ ಹೊರಗಡೆಯೇ ಇರ್ತಾರೆ ಜನ. ಈ ಸಮಯದಲ್ಲಂತೂ ಸೆಂಡಿಗೆ, ಹಪ್ಪಳ, ಉಪ್ಪಿನಕಾಯಿ ಮಾಡುವುದು ಅಂತ ಅತ್ತೆ ಸೊಸೆಯರು ಗಡಿಬಿಡಿಯಲ್ಲಿರುತ್ತಾರೆ.


ಆದರೆ ಬೆಂಗಳೂರಿನಲ್ಲಿ ಹಾಗಲ್ಲ. ಯಾವಾಗಲೂ ಲಾಕ್ ಡೌನ್ ಅಲ್ಲಿ ಇದ್ದ ಅನುಭವ. ಕೆಲಸಕ್ಕೆ ಹೋಗಿ ಬಂದ ಮೇಲೆ ಸ್ವಯಂ ಲಾಕ್ ಡೌನ್. ಅದಕ್ಕೆ ನಮ್ಮ ತಂದೆಯವರಿಗೆ ಬೆಂಗಳೂರು ಇಷ್ಟ ಆಗುವುದಿಲ್ಲ. ಇಲ್ಲಿಗೆ ಬಂದರೆ ಮೂರು ದಿನಕ್ಕಿಂತ ಜಾಸ್ತಿ ಇರಲು ಸಾಧ್ಯವಿಲ್ಲ. ನಾಲ್ಕು ಗೋಡೆಗಳ ಮದ್ಯೆ ಬಂಧಿಯಾಗಿ ಬದುಕುವುದು ಹಳ್ಳಿ ಜನರಿಗೆ ಕಷ್ಟವೇ ಸರಿ. ಮೊದಮೊದಲು ನನಗೂ ಹುಚ್ಚು ಹಿಡಿದಂತೆ ಆಗುತ್ತಿತ್ತು. ಆದರೆ ಈಗ ಸಾಹಿತ್ಯದ ಹುಚ್ಚು ಹಿಡಿದಿದೆ. ಹಾಗಾಗಿ‌ ಸಮಯ ಕಳೆಯುವುದು ಅಷ್ಟೊಂದು ಕಷ್ಟ ಅನ್ನಿಸುವುದಿಲ್ಲ. ಆ ದಿನಗಳಲ್ಲಿ ಊರಿನ ಹಚ್ಚಹಸುರಿನ ನಿಸರ್ಗ ತಾಣದಲ್ಲಿ ಕವನಗಳನ್ನು ಗೀಚಲು ಪ್ರಾರಂಭಿಸಿದ್ದೆ. ಆಗ ಹವ್ಯಾಸವಾಗಿದ್ದ ಬರವಣಿಗೆ ಈಗ ಅನಿವಾರ್ಯವಾಗಿ ಬಿಟ್ಟಿದೆ.


ಹಾ!  ನಮ್ಮ ಅಪಾರ್ಟ್ಮೆಂಟ್ ಅಲ್ಲಿ ಯಾಕಿಷ್ಟು ಮೌನ ಮನೆ ಮಾಡಿದೆ?  ಅಂತ ಹೇಳಲೇ ಇಲ್ಲ ಅಲ್ವ. ಇಂದು ಸಂಜೆ  ಪಂಚಾಯಿತಿಯವರು ಬಂದು ಇಡೀ ಕಟ್ಟಡವನ್ನು ಸಾನಿಟೈಸ್ ಮಾಡಿ ಹೋಗಿದ್ದಾರೆ.


"ಯಾಕೆ ಏನಾಯಿತು?"


ಎಂದು ವಾಚ್ ಮ್ಯಾನ್‌ ಅನ್ನು ವಿಚಾರಿಸಿದರೆ ನಮ್ಮ ಅಪಾರ್ಟ್ಮೆಂಟ್ ನಲ್ಲಿ ಕೊರೋನಾ ಪಾಸಿಟಿವ್ ಕೇಸ್ ಬಂದಿದೆ ಎಂದು ತಿಳಿಯಿತು. ಪೋಲೀಸರು, ಪಂಚಾಯತ್ ನವರು "ಹೊರಗಡೆ ಎಲ್ಲೂ ಓಡಾಡಬೇಡಿ", "ಮನೆಯಲ್ಲೇ ಸುರಕ್ಷಿತವಾಗಿರಿ" ಎಂದು ತಿಳಿಸಿದ್ದಾರೆ. ನಾವೀಗ "ಅಸುರಕ್ಷಿತ ವಲಯ"ದಲ್ಲಿದ್ದೇವೆ ಎಂದು ತಿಳಿಯಿತು.


ಯಾವುದೇ ರೋಗ ಮನೆ ಬಾಗಿಲಿಗೆ ಬರುವವರೆಗೂ ಜನ ಹೆದರುವುದಿಲ್ಲ. ತನ್ನ  ಕಾಲಬಳಿ ಬಂದ ಮೇಲೆ ಗಾಬರಿಗೊಳ್ಳುತ್ತಾರೆ. ಎಲ್ಲೆಂದರಲ್ಲಿ  ಭಯವಿಲ್ಲದೇ ಮಾಸ್ಕ್ ಧರಿಸದೇ ಓಡಾಡುವುದು, ಸರ್ಕಾರದ ನಿಯಮಗಳನ್ನು ಮುರಿದರೆ ಏನಾಗುತ್ತದೆ? ನೋಡಿಯೇ ಬಿಡೋಣ ಎಂದು ತಾಕೀತು ಮಾಡುವುದು, ದೂರದರ್ಶನ ನೋಡಿ ಸುಮ್ಮನೆ ಈ ಮಾಧ್ಯಮದವರು ಪುಕಾರು ಹಬ್ಬಿಸುತ್ತಾರೆ ಎಂದು ದೂರುವುದು, ಅಮ್ಮ ಕಷಾಯ ಮಾಡಿ ಕೊಟ್ಟರೆ ಮೂಗು ಮುರಿಯುವುದು. ಇದೇ ಆಯಿತು ನಮ್ಮ ಕತೆ!


ಇನ್ನಾದರೂ ಎಚ್ಚೆತ್ತುಕೊಳ್ಳೋಣ ಸ್ನೇಹಿತರೇ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳೋಣ. ಮನೆಯಲ್ಲಿಯೇ ಇದ್ದು ಸುರಕ್ಷಿತ ಕ್ರಮಗಳನ್ನು ಪಾಲಿಸೋಣ. ಕೋವಿಡ್ 19 ವೈರಾಣುವಿನ ವಿರುದ್ಧ ಹೋರಾಡೋಣ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳೋಣ. "ಸಂಕಟ ಬಂದಾಗ ವೆಂಕಟ ರಮಣ" ಅನ್ನುವ ಹಾಗೆ ಇನ್ನಾದರೂ ದೇವರ ಸ್ಮರಣೆ ಮಾಡೋಣ. ಹಿಂದಿನವರು ನಮಗೆ ಬಳುವಳಿಯಾಗಿ ನೀಡಿದ ಸರಳ ಯೋಗ, ಧ್ಯಾನ ,ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿ ನಮ್ಮ ಶ್ವಾಸಕೋಶವನ್ನು ಸುದೃಢಗೊಳಿಸಿಕೊಳ್ಳೋಣ. "ಹಣೆಬರಹಕ್ಕೆ ಹೊಣೆ ಯಾರು" ಎಂಬಂತೆ ಹುಟ್ಟು- ಸಾವು ಎರಡು ನಮ್ಮ ಕೈಯಲ್ಲಿಲ್ಲ. ಯಾರನ್ನು ದೂರಿ ಪ್ರಯೋಜನವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳಿತಲ್ಲವೇ? ಹೊರಗಡೆ ಹೋಗುವಾಗ ಅಸಡ್ಡೆ ಮಾಡದೇ ತಪ್ಪದೇ ಮಾಸ್ಕ್ ಧರಿಸಿಕೊಳ್ಳಿ. ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳಿ. ಯಾವುದಕ್ಕೂ ಒಬ್ಬ ವೈದ್ಯ,   ಶುಶ್ರೂಷಕಿ ಅಥವಾ ಆಶಾ ಕಾರ್ಯಕರ್ತೆಯರ ದೂರವಾಣಿ ಸಂಖ್ಯೆ ನಮ್ಮ ಬಳಿ ಇರಲಿ.  "ಆರೋಗ್ಯಕರ ಜೀವನ ನೆಮ್ಮದಿಯ ಬದುಕಿಗೆ ಸೋಪಾನ."
Add comment