ಖ್ಯಾತ ಲೇಖಕ ವಸುಧೇಂದ್ರ ಅವರು ಮಾಸ್ತಿ, ಪು.ತಿ.ನ ಅವರ ಬಗ್ಗೆ ಬರೆಯುತ್ತಾ 'ಅವರನ್ನು ನೋಡಿದ ಕೂಡಲೇ ಆಧುನಿಕತೆ ಎನ್ನಲು ಅಡ್ಡಿಯಾಗುವುದು ಅವರ ಹಣೆಯ ಮೇಲಿನ ನಾಮ ಮತ್ತು ಅಕ್ಷತೆ...' ಎನ್ನುತ್ತಾರೆ. ಆದರೆ ಅವರಿಬ್ಬರೂ ಅದೆಂತಹ ಆಧುನಿಕ, ಪ್ರಗತಿಪರ ಮನೋಭಾವದವರು ಎಂಬುದನ್ನು ಸೊಗಸಾಗಿ ವಿವರಿಸಿದ್ದಾರೆ!
ಹಾಗೆಯೇ ನಮ್ಮ ದಿವಂಗತ ಪ್ರಿನ್ಸಿಪಾಲ್ ಬಿ. ಸೀತಾರಾಮ ಶೆಟ್ಟಿಯವರು. ಯಾವಾಗಲೂ ಅತ್ಯಂತ ಸುಂದರವಾದ, ಸ್ವಚ್ಛವಾದ, ಗರಿಗರಿ ಇಸ್ತ್ರಿ ಹಾಕಿದ ಉತ್ತಮ ಗುಣಮಟ್ಟದ ಮತ್ತು ಅಷ್ಟೇ ಅಚ್ಚುಕಟ್ಟಾಗಿ ತೊಟ್ಟ ಬಟ್ಟೆಗಳು. ಸಾರ್ವಜನಿಕವಾಗಿ ಮತ್ತು ಮನೆಯಲ್ಲಿ ಕೂಡ ಅನುಕ್ಷಣ ನಿರ್ಮಲವಾಗಿ, ಸ್ವಚ್ಚವಾಗಿ, ಚೆಂದವಾಗಿ, formal ಆಗಿ ಕಾಣಿಸಿಕೊಳ್ಳುವವರು. ನಿಲುವು ಕೂಡ ಹಾಗೆಯೇ! ವಿಗ್ರಹ ನಿಂತ ಹಾಗೆ. ಆಕರ್ಷಕ ರೂಪ ಮತ್ತು ಆಳ್ತನ. ಮಳೆಯೇ ಆಗಲಿ, ಹಿಡಿದ ಕೊಡೆ ಸಿಂಹಾಸನದ ಮೇಲಿನ ಶ್ವೇತಛತ್ರದ ಹಾಗೆ. ಅದು ಅಲುಗಾಡಿದ್ದನ್ನು, ಗಾಳಿ, ಸಿವ್ರ್ ಬೀಸಿದತ್ತ ವಾಲಿದ್ದನ್ನು ಕಂಡವರಿಲ್ಲ. ಅವರು ಮನೆಯಿಂದ ಕಾಲೇಜಿಗೆ ನಡೆಯುವುದನ್ನು ನಿಂತು ನೋಡುವವರಿದ್ದರು ಎಂದರೆ ನೀವು ನಂಬಲಾರಿರಿ!
ಅಪಶಬ್ದವಿಲ್ಲದ ಶಿಸ್ತಿನ ಮಾತು. ಇಸ್ತ್ರಿ ಹಾಕಿದಂತಹ ವಾಕ್ಯಗಳು. ಜೋರಾಗಿ ನಗುವುದು ಕಡಿಮೆ. ಆದರೆ ಎಂದೂ ಮುಖ ಗಂಟಿಕ್ಕಿದವರಲ್ಲ. ಕ್ಲಾಸಿನಲ್ಲಿ, ವೇದಿಕೆಯಲ್ಲಿ ಹಿತಮಿತ ಮಾತು.
ಇಷ್ಟು ಕೇಳಿದ ಮೇಲೆ ಸಹಜವಾಗಿ ಅವರು ಗಂಭೀರ, ಕಡಿಮೆ ಮಾತಿನ, ಬಿಗುಮಾನದ, ಗರ್ವದ ವ್ಯಕ್ತಿ ಎಂದು ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ಇಲ್ಲ! ಇವೆಲ್ಲದರ ಮರೆಯಲ್ಲಿ ಒಬ್ಬ ಉದಾರ, ಸರಳ, ನಿಷ್ಕಪಟ ಮನುಷ್ಯನಿದ್ದಾನೆ. ಅವರು ಎಲ್ಲವನ್ನೂ ಸಹಜವಾಗಿ, ಸರಳವಾಗಿ, ಸೋಗಿಲ್ಲದೆ ನಡೆಯಿಸಿಕೊಂಡು ಬಂದವರು. ಮಕ್ಕಳ ಮೇಲೆ ಸಹಜ, ನಿರ್ವ್ಯಾಜ ಪ್ರೀತಿ. ಭೇದಭಾವ, ಅಹಂಕಾರ ಇಲ್ಲದ ವ್ಯವಹಾರ - ಎಲ್ಲರ ಜತೆ. ಅವರ ಮೂವರು ಮಕ್ಕಳು ಅದೇ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ ಎಂಬುದು ಉಳಿದ ಮಕ್ಕಳಿಗೂ ತಿಳಿಯದು ಎಂಬಷ್ಟು ನಿರ್ಲಿಪ್ತ, ನಿಷ್ಪಕ್ಷಪಾತ ಭಾವ. ಆ ಮಕ್ಕಳು ಕೂಡ ಅಷ್ಟೇ ಘನತೆಯಿಂದ ನಡೆದುಕೊಂಡವರು.
ಪ್ರಿನ್ಸಿಪಾಲ್ ಎಂಬ ಪದ ಅವರಿಗೆ designation, ಪದವಿ, ಅಧಿಕಾರ, ಹುದ್ದೆ ಏನೂ ಆಗಿರಲಿಲ್ಲ. ಅದು ಅವರ ಹೆಸರಿನ ಒಂದು ಭಾಗವಾಗಿತ್ತು. ಅದನ್ನು ಅವರು ಸರಳವಾಗಿ, ಸಹಜವಾಗಿ ಸ್ವೀಕರಿಸಿದ್ದರು. ಅದಕ್ಕೆ ಬಲು ದೊಡ್ಡ ಹೃದಯ ಬೇಕು. ಅದು ನಿವೃತ್ತ ಆಗುವ "ಪ್ರಿನ್ಸಿಪಾಲ್" ಅಲ್ಲ! ಅವರು ಅವರ ವಿದ್ಯಾರ್ಥಿಗಳಿಗೆ ಮಾತ್ರ ಪ್ರಿನ್ಸಿಪಾಲ್ ಆಗಿರಲಿಲ್ಲ - ವಿದ್ಯಾರ್ಥಿಗಳಿಗೆ, ಅವರ ಪಾಲಕ-ಪೋಷಕರಿಗೆ, ಅಧ್ಯಾಪಕರಿಗೆ, ಊರವರಿಗೆ, ಪರವೂರಿನವರಿಗೆ... ಎಲ್ಲರಿಗೂ ಪ್ರಿನ್ಸಿಪಾಲರೇ! ಅವರು ನಿವೃತ್ತರಾಗಲೇ ಇಲ್ಲ.
ಅವರು ತಮ್ಮ ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುವುದು, ಅವರ ಜತೆ ಮಾತನಾಡುವುದು ಎಲ್ಲವೂ ವಿಶೇಷ, ಅಪ್ಯಾಯಮಾನ, ಆದರ್ಶ. ಸಾವಿರಾರು ಸಾವಿರಾರು ವಿದ್ಯಾರ್ಥಿಗಳ ಹೆಸರು, ಹಿನ್ನೆಲೆ ಎಲ್ಲವೂ ಅವರಿಗೆ ನಾಲಿಗೆ ತುದಿಯಲ್ಲಿ! ಇದಕ್ಕಾಗಿ ಅವರ ನೆನಪಿನ ಶಕ್ತಿಯ ಬಗ್ಗೆ ವಿಸ್ಮಯ ಪಡುವವರಿದ್ದಾರೆ. ಆದರೆ ಇದು ಅವರ ಮಿದುಳಿನ ಶಕ್ತಿ ಅಲ್ಲ; ಬದಲಿಗೆ, ಅವರ ಪ್ರೀತಿ ಮತ್ತು ಅಂತಃಕರಣಗಳ ಶಕ್ತಿ.
"ನಾವಿಂದು ವಿದ್ಯಾವಂತರಾಗಿ, ಮಾನವಂತರಾಗಿ, ಸುಖವಾಗಿ ಬದುಕಿದ್ದರೆ ಅದು ಸೀತಾರಾಮ ಶೆಟ್ಟಿಯವರ ಸಹಾಯ, ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ" ಎಂದು ಕೃತಜ್ಞತೆ ಮತ್ತು ಗೌರವದಿಂದ ಹೇಳುವ ಅಸಂಖ್ಯಾತ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿದ್ದಾರೆ.
"ನಾನು ಸೀತಾರಾಮ ಶೆಟ್ಟಿಯವರ ಪ್ರಿಯ ಶಿಷ್ಯ, ಪಟ್ಟ ಶಿಷ್ಯ" ಎಂದು ಹೇಳಿಕೊಳ್ಳುವ ವಿದ್ಯಾರ್ಥಿಗಳಿಲ್ಲ! ಏಕೆಂದರೆ ಎಲ್ಲರೂ ಅವರ ಪ್ರಿಯ ವಿದ್ಯಾರ್ಥಿಗಳೇ!
ಅವರು ಪ್ರಿನ್ಸಿಪಾಲ್ ಆಗಿ ನೇಮಕ ಆದದ್ದು ಕೂಡ ಒಂದು ವಿಲಕ್ಷಣ ವಿದ್ಯಮಾನ. ದಕ್ಷತೆ, ವಿದ್ವತ್, ಅರ್ಹತೆ ಎಲ್ಲದರಲ್ಲೂ ಖ್ಯಾತಿಯ ಉತ್ತುಂಗಕ್ಕೇರಿದ ಪಿ.ಎನ್. ಭೋಜರಾವ್ ಅವರು ನಿವೃತ್ತರಾದಾಗ ಆಡಳಿತ ಮಂಡಳಿಯು ಉಳಿದವರ ಸೇವಾ ಹಿರಿತನವನ್ನು ಗಣಿಸದೆ ಅತ್ಯಂತ ಕಿರಿಯನಾದ, ಮೂವತ್ತರ ಆಸುಪಾಸಿನ ಸೀತಾರಾಮ ಶೆಟ್ಟಿಯವರನ್ನು ಪ್ರಿನ್ಸಿಪಾಲರನ್ನಾಗಿ ನೇಮಿಸಿತು. ಎಲ್ಲರ ನಿರೀಕ್ಷೆ ಏನಿತ್ತು!? ಸೋಲು, ಅಸಹಕಾರ, ಭಿನ್ನಮತ. ಆದರೆ ಹಾಗಾಗಲಿಲ್ಲ! ಸೀತಾರಾಮ ಶೆಟ್ಟಿಯವರು ಗೆದ್ದರು - ಅಧಿಕಾರ ಸ್ಥಾಪನೆ, ಠೇಂಕಾರ, ನಿರಂಕುಶ ಆಡಳಿತ, ದಬ್ಬಾಳಿಕೆಗಳಿಂದ ಅಲ್ಲ. ಅಥವಾ ಚಾಕಚಕ್ಯತೆ, ಕುಟಿಲ ಭೇದೋಪಾಯ, diplomatic ನಡೆಗಳಿಂದ ಕೂಡ ಅಲ್ಲ. ಅವರು ಸಫಲರಾದದ್ದು ಅದೇ ಸಹಜ ಪ್ರೀತಿ ಮತ್ತು ಅಪ್ರಜ್ಞಾಪೂರ್ವಕ ಸರಳತೆಯಿಂದ. ಅವರ ಗಮನ ವಿದ್ಯಾರ್ಥಿಗಳ ಪುರೋಭಿವೃದ್ಧಿ ಮಾತ್ರ.
ಅವರಲ್ಲಿ ನಮಗೆ ಎದ್ದು ಕಾಣುವ ಇನ್ನೊಂದು ಗುಣವೆಂದರೆ ಸಕಾರಾತ್ಮಕ ಧೋರಣೆ ಮತ್ತು ಮಾತು. ಅದು ತಮ್ಮ ವಿದ್ಯಾರ್ಥಿಗಳ ಬಗ್ಗೆ ಇರಬಹುದು ಅಥವಾ ನಿವೃತ್ತಿಯ ಅನಂತರ ಅವರೇ ಮಾಡುತ್ತಿದ್ದ ಕೃಷಿ ಇರಬಹುದು. ಅಲ್ಲಿ ನಿರಾಶೆ, ಹತಾಶೆ, ಸೋಲು, ನಷ್ಟ, ಭ್ರಮನಿರಸನ ಯಾವುದಕ್ಕೂ ಆಸ್ಪದ ಇಲ್ಲ. "ನಾಳೆ ಸರಿಯಾಗುತ್ತದೆ."
ಅವರಂತಹ ದೊಡ್ಡ ಮನಸ್ಸು, ಹೃದಯವನ್ನು ಹೊಂದುವುದು ಬಲು ಅಪುರೂಪ. ತನ್ನ ವಿದ್ಯಾರ್ಥಿಯಾಗಿದ್ದವನು ಮುಂದೆ ಜೀವನದಲ್ಲಿ ಏನೇ ಸಾಧಿಸಲಿ, ಆ ಎಲ್ಲ ವಿದ್ಯಾರ್ಥಿಗಳು ಸಮಾನರು. ಆತ ಡಾಕ್ಟರ್, ಇಂಜಿನಿಯರ್, ರೈತ, ಹೋಟೆಲ್, ಕಾರ್ಮಿಕ... ಎಲ್ಲರಿಗೂ ಸಮಾನ ಮತ್ತು ನಿಷ್ಕಲ್ಮಶ ಪ್ರೀತಿ, ಗೌರವ. ಮೊನ್ನೆ ಅಸೌಖ್ಯದಲ್ಲಿ ಕೊನೆಯ ಬಾರಿ ಮಲಗುವ ತನಕ ಅವರು ತಮ್ಮ ಶಿಷ್ಯರು ಯಾರೇ ಆಗಲಿ, ಯಾವುದಕ್ಕೇ ಆಗಲಿ ಆಮಂತ್ರಿಸಿದರೆ ಹೋಗುತ್ತಿದ್ದರು. ತಿರುಗಾಟಕ್ಕೆ ವಯಸ್ಸು ಅಡ್ಡಿಯಾಗಲೇ ಇಲ್ಲ. ಕರೆದವರ ಅಂತಸ್ತು ಅಡ್ಡಿಯಾಗಲಿಲ್ಲ. ಕೊನೆಯ ಕ್ಷಣದ ತನಕ ಅದೇ ಉತ್ಸಾಹ, ಅದೇ ತೀಕ್ಷ್ಣ ನೆನಪು. ಹೋದಲ್ಲಿ ಬಂದಲ್ಲಿ ದೊಡ್ಡ ಮಣೆ ತನಗೆ ಸಿಗಬೇಕು ಎಂಬ ಅಭಿಲಾಷೆ ಕೂಡ ಇರಲಿಲ್ಲ.
ಇವತ್ತು ಕೂಡ ಹಾಗೆಯೇ. ಅವರ ಅಂತ್ಯ ಸಂಸ್ಕಾರದ ಹೊತ್ತಿನಲ್ಲಿ ಅವರ ಪ್ರೀತಿಪಾತ್ರರೆಲ್ಲರೂ, ಸಾಧ್ಯವಾದವರೆಲ್ಲರೂ ಬಂದಿದ್ದರು. ಇಂತಹವರಿಗೆ ಸಲ್ಲುವ ಮಾತು - ಮರಣವೇ ಮಹಾನವಮಿ! ಮರಣವೆಂಬ ಮಹಾನವಮಿ! ಅವರೂ ಮರಣವನ್ನು ಕಾಯಿಸಲಿಲ್ಲ, ಮುಂದೂಡಲಿಲ್ಲ. ಮರಣವೂ ಅವರನ್ನು ಕಾಯಿಸಲಿಲ್ಲ, ಸತಾಯಿಸಲಿಲ್ಲ.
ಅವರಿಗೆ ಎಂತಹ ಸದ್ಗತಿಯನ್ನು ಹಾರೈಸುವುದು!? ಅವರ ಬದುಕೇ ಒಂದು ಸದ್ಗತಿ. ಅದರೊಂದಿಗೆ ಕೋದ ನಮ್ಮ ಬದುಕಿಗೂ ಒಂದು ಸದ್ಗತಿ.
ದಿವಂಗತ ಶ್ರೀ ಬಿ. ಸೀತಾರಾಮ ಶೆಟ್ಟಿಯವರ ಓರ್ವ ಶಿಷ್ಯ.