logo

Kannada Poems by Vanitha Martis

Click here to read earlier poems by Vanitha Martis, Barkur

Page 1 

Page 2

✍️ ವನಿತಾ ಮಾರ್ಟಿಸ್.











** ಕಸಬರಿಗೆ **

••••••••••••••••••

ಬಡವ ಶ್ರೀಮಂತ ಎಂಬ ಭೇದವಿಲ್ಲ !

ಉಪಕಾರಿ 'ಕಸಬರಿಗೆ' ನೀ ಜನಕೆಲ್ಲ !

ಬಹುಕಾಲ ಮೂಲೆಯಲ್ಲಿ ನಿನ್ನ ವಾಸ !

ಹೊರ ಬಂದೊಡನೆಯೇ ಸ್ವಚ್ಛತೆಯ ಕೆಲಸ!!


ಪೊರಕೆ, ಹಿಡಿಸೂಡಿ, ಪರಿಕೆ, ಕಸಬರಕಿ.....

ನಾನಾ ನಾಮಧೇಯವು ನಿನ್ನ ಕರೆಯಲು !

ಈಚಲು, ಅಡಿಕೆ, ತೆಂಗು, ಪ್ಲಾಸ್ಟಿಕ್.....

ಮುಂತಾದ ಬಳಕೆಗಳು ನಿನ್ನ ರೂಪಿಸಲು !

ರೂಪಗಳು ಹಲವಾರು, 

            ಸ್ವಚ್ಛತಾ ಕಾರ್ಯ ಒಂದೇ ನಿನಗೆ !!


ನಿನ್ನ ಇರುವಿಕೆಗೆ ಇಲ್ಲಿವೆ ನಾನಾ  ಧಾರ್ಮಿಕ ನಂಬುಗೆಗಳು:

ನೀ ಅಡ್ಡ ಇರಬಾರದು !

ಕೈಯಿಂದ ಕೈಗೆ ನಿನ್ನ ಕೊಡಬಾರದು !

ನೀ ಅನ್ನ ಬಾಚಬಾರದು !

ಬೆಡ್ ರೂಂ ಮೂಲೆ ಸೇರಬಾರದು !

ಮುಖ್ಯ ದ್ವಾರದಿ  ನಿನಗೆ ಸ್ಥಾನವಿಲ್ಲ !

ಮನೆ ಹೊಕ್ಕವರ ಕಣ್ಣಿಗೆ ನೀ ಕಾಣುವಂತಿಲ್ಲ !

ಅಡುಗೆ ಕೋಣೆ, ದೇವರ ಕೋಣೆ ನಿನಗೆ ಒಳಿತಲ್ಲ.!!

    ಈ ಮಾತು ಮೀರಿದರೆ, 

                ಮಾನವನಿಗೆ  ಅಶುಭ...ಅಶುಭ !!

ನೀ ಇಲ್ಲದಿರೆ ಅವನ ನೆಲೆ ಅಶುಚಿ...ಅಶುಚಿ !!


ಹುಟ್ಟುವಾಗ ನೀ , ಹಿಡಿ ತುಂಬಿದ ಸುಂದರಿ !!

ನಿನ್ ಜೀವ ಸವೆದು, ನಮ್ ಸ್ಥಳ ಮಾಡ್ವೆ ಅಂದವ !!

ಮುಂದೊಂದು ದಿನ ಉಳಿವುದು 

                            ಮೂಳೆ ಮಾತ್ರ ನಿನ್ನಲಿ !!

ಬೀಸಿ ಬಿಸಾಡುವರು, ಸುಟ್ಟು ಬೂದಿ ಮಾಡುವರು,  ನಿನ್ನ ಹೆಣದ ತೆರದಿ !!


ಉಪಕಾರ ಬಯಸಿ ಜನಿಸಿದೆ ನೀ !!

ಉಪಕಾರಿ ಆಗಿಯೇ ಸಾಯುವೆ ನೀ !!

ಗೌರವ, ಪ್ರಶಸ್ತಿ, ಹೊಗಳಿಕೆ ನಿನಗೆ ಬೇಕಿಲ್ಲ ನಿರತ !!

ಈ ಸರಳತೆಯ ನೀತಿ ನಾವೂ ಪಾಲಿಸೋಣ ಸತತ !!!


★★ನನ್ನಾಸೆ★★


ಸುಪ್ರಭಾತದ ನಸುಬೆಳಕಿನಲಿ

  ಪುಕ್ಕ ಬಿಚ್ಚಿ ಚಿಲಿಪಿಲಿ ಎನುತ

    ಪುಟ್ಟ ಬಾನಾಡಿಯಾಗುವ ಆಸೆ!!


  ಮುಂಜಾವಿನ ಬೆಳಕಿನಲ್ಲಿ

    ಮೂಡುವ ಹೊಂಗಿರಣದಲ್ಲಿ

      ನಾನೊಂದು ಕಿರಣವಾಗುವಾಸೆ!!


ಹೊಂಬೆಳಕನ್ನು ಧರೆಗೆ ಚೆಲ್ಲಿ

  ಹೂ ಎಲೆಗಳಲ್ಲಿ ಮುತ್ತಿನಂತೆ

    ಕಂಗೊಳಿಸುವ ತುಷಾರವಾಗುವಾಸೆ!!


ಸಾಗರದಲಿ ಪುಳಕಗೊಳ್ಳುವ

  ಆಹ್ಲಾದಭರಿತ ಮಾರುತದ

     ಒಂದು ಅಲೆಯಾಗುವ ಆಸೆ!!


ವಸಂತ ಕಾಲದಿ ಹಸಿರು

  ಅದರೊಡೆ ಕುಹು ಕುಹೂ ಸೇರಿಸುವ

    ಮಧುರ ಕಂಠದ ಪಿಕವಾಗುವ ಆಸೆ!!


ಸುಂದರ ಪ್ರಕೃತಿಯೊಡನೆ ಬೆರೆಯುವಾಸೆ !!!


* *  ನಾನು ನನ್ನ ನೆರಳು * *

----------------------------------------

ನಾ ಬೆಳೆದಂತೆ ನನ್ನೊಳಗೇ ಬೆಳೆಯುತಿರುವೆ...

ನಾ ಸವಿದ ಸಂತಸವ ನೀ ಸವಿದಿರುವೆ...

ನಾ ಸಹಿಸಿದ ಕಷ್ಟವ ನೀನೂ ಸಹಿಸಿರುವೆ ...

ನನ್ನ ನೋವು ನಲಿವುಗಳ ನೀ ಮಾತ್ರ ತಿಳಿದಿರುವೆ...!!


ಬದುಕಿನ ಆರಂಭದಿಂದ ಅಂತ್ಯದವರೆಗೆ ನೀ ಎನ್ನ ಜೊತೆಯಿರುವೆ...

ಯಾವ ಜನ್ಮದ ನಂಟೋ ನಾ ಅರಿಯೆ,  ನನ್ನೊಳಗೇ ನೀ ಬೆರೆತಿರುವೆ...

ಹಗಲಿನಲಿ ಬೆಂಬಿಡದೆ  ನನ್ನೊಡನೆ ಬರುವೆ...

ಇರುಳಲಿ ನನ್ನಲ್ಲೇ ಬೆರೆತು ಬಿಡುವೆ...!!


ಬಾಲ್ಯಾವಸ್ಥೆಯಲಿ ಭೂತವೆಂದು ನಿನ್ನ ನಾ ತಿಳಿದೆ...

ಯೌವನದಲಿ ಕುತೂಹಲದಿ ನಾ ನಿನ್ನ ಅರಿತೆ...

ನಿರ್ವಿಕಾರವಾಗಿ ನನ್ನ ನೀ ಹಿಂಬಾಲಿಸುತ್ತಿರುವೆ...

ಫಲಾಪೇಕ್ಷೆಯಿಲ್ಲದೆ ನನ್ನೊಡನೆಯೇ ನೀನಿರುವೆ...!! 


ನಾ ಎಲ್ಲಿ ಸಾಗಿದರೂ ಬೆಂಬತ್ತಿಹ ಜೊತೆಗಾರ್ತಿಯಾಗಿರುವೆ...

ಏನೂ ಕೇಳದೆ ನನ್ನೊಡನೆಯೇ  ಆತ್ಮವಿಶ್ವಾಸದಿಂದಿರುವೆ...

ಸುಖ ದುಃಖದಲಿ ಗೊಣಗದೆ ನೀನು ಎನ್ನ ಬೆನ್ನಾಗಿರುವೆ...

ಬಂಧು ಬಳಗ ಮಾಯವಾದರೂ ಬಿಟ್ಟಗಲದ ಸ್ನೇಹಿತೆಯಾಗಿರುವೆ...!!


ನಾ ನಿಂತರೆ ನಿಲ್ಲುವೆ, ನಾ ಕೂತರೆ ಕೂರುವೆ...

ಬದುಕಿನುದ್ದಕ್ಕೂ ನೀ ಎನ್ನ ಜೊತೆಯಿರುವೆ...

ಬೆಳಕಲಿ ಹೊರಕಾಣುವೆ, ಕತ್ತಲಾದೊಡನೆ ಒಳಸೇರುವೆ...

ಸಾವಿನಲೂ ಜೊತೆಯಾಗಿ   ನಿನ್ನ ಚಲನೆ ಮರೆತು ನನ್ನೊಡನೇ  ಸೇರುವೆ... !!!


 ** ನೀನಲ್ಲಿ...ನಾನಿಲ್ಲಿ **

--------------------------------

ಹೃದಯದ ಅಂಗಳದಲಿ...

ಪ್ರೀತಿಯ ಚಿತ್ತಾರವ ಬಿಡಿಸಿ...

ನೆನಪುಗಳ ನನ್ನಲ್ಲಿ ಇರಿಸಿ...

ನೀ ದೂರ ಹೋದೆ, ಕಣ್ಮರೆಯಾದೆ..!!!


ಹೊಟ್ಟೆಪಾಡಿನ ದುಡಿತಕೆ...

ಪರದೇಶದಾಸರೆ  ನೀ ಪಡೆದೆ...

ಈ ರೋಗ ಒಡ್ಡಿದೆ ಈಗ ಅಡ್ಡಗೋಡೆ,

ನೀನಲ್ಲಿ... ನಾನಿಲ್ಲಿ... ಏನೋ ವ್ಯಥೆ!!


ಅಂದು ಮೊದಲ ಪ್ರೀತಿಯಲಿ,

ಕಾಮನಬಿಲ್ಲು ನಮ್ಮೆದೆಯಲ್ಲಿ !!

ಈಗ ಹೃದಯಕೆ ಹಗಲಿರುಳು,

ನನ್ನೀ ಕನಸುಗಳಿಗೆ ಬಲು ಅಮಲು!!


ನೀ ಬಿತ್ತಿ ಹೋದ ಪ್ರೀತಿಯ ಬಳ್ಳಿ

ಸೊರಗಿದೆ, ಕೊರಗಿದೆ ನೀನಿಲ್ಲದೇ....

ಭಾವನೆಗಳೆಲ್ಲ ಬತ್ತಿ, ಹೃದಯ ಮರುಭೂಮಿ!!

ಪ್ರೀತಿಯ ಸೆಳೆತಕೆ ಒಲವಿನ ಒರತೆ, ಉಳಿದೆ ಅಲ್ಲಿ!!!


ಮೌನದ ಕ್ಷಣಗಳಲಿ..

ಸಹಿಸಲಾರೆ ಈ ಚಡಪಡಿಕೆ..

ಹೆಚ್ಚಾಗಿದೆ ಕಾತರವು, ಆತರವು!

ಒಮ್ಮೆ ಕಾಣುವಾಸೆ, ಕನಸು ನನಸಾಗುವಾಸೆ!!!


ಜಾರುತಿದೆ ಮನ ಕ್ಷಣಕ್ಷಣವು ನಿನ್ನಲಿ!!

ಈ ಕೊರೊನಾ ಮಾರಿ ದೂರಾಗಲಿ...

ಬೇಗನೆ ಬರುವಂತಾಗಲಿ ನೀನಿಲ್ಲಿ...

ನಮ್ಮ ಮನದಾಳದ ಆಸೆಗಳು ಈಡೇರಲಿ....


✍️ ವನಿತಾ ಮಾರ್ಟಿಸ್.

Add comment