ಬಂಡಿಮಠ ಶಿವರಾಮ ಆಚಾರ್ಯ
ಬೆಣ್ಣೆಕುದ್ರುವಿನಲ್ಲಿ ಬೃಹತ್ ರಥ ಹಗ್ಗ ತಯಾರಿ
ಆಧುನಿಕತೆ ಮಧ್ಯೆ ಸಾಂಪ್ರದಾಯಿಕ ಕಸುಬುಗಳು ಮಾಯವಾಗುತ್ತಿದ್ದರೂ ಕೆಲವು ವಸ್ತುಗಳಿಗೆ ಸಾಂಪ್ರದಾಯಿಕತೆಯೇ ಬೇಕಾಗುತ್ತದೆ. ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನದ ರಥವೊಂದಕ್ಕೆ ಬಾರಕೂರು ಬಳಿ ಬೆಣ್ಣೆಕುದ್ರುವಿನಿಂದ ಬೃಹತ್ ಹಗ್ಗ ತಯಾರಾಗಿದೆ.
ಬೆಣ್ಣೆಕುದ್ರುವಿನ ಶಿವ ಪೂಜಾರಿ 50 ವರ್ಷಗಳಿಂದ ತೆಂಗು ಬೆಳೆಗಾರರಿಂದ ತೆಂಗಿನ ಸಿಪ್ಪೆ ಖರೀದಿಸಿ, ಸಂಗ್ರಹಿಸಿ ನದಿ ನೀರಿನಲ್ಲಿ ಕೊಳೆಯುವಂತೆ ಮಾಡಿ ಹದಗೊಳಿಸಿ ನಾರಿನ ಹಗ್ಗ ಮಾಡುತ್ತಿದ್ದರು. ಇಲ್ಲಿನ ಕೆಲವು ದೇವಸ್ಥಾನಗಳ ರಥಕ್ಕೆ ಬೇಕಾಗುವ ಹಗ್ಗವನ್ನು ಇವರೇ ತಯಾರಿಸುತ್ತಿದ್ದರು. ಆಧುನಿಕತೆಯ ಪರಿಣಾಮ ನೈಲಾನ್ ಹಗ್ಗ ಬಳಕೆಯಿಂದ ತೆಂಗಿನ ನಾರಿನ ಹಗ್ಗಕ್ಕೆ ಬೇಡಿಕೆ ಕುಸಿತಗೊಂಡಿದೆ. ತಂದೆಯೊಂದಿಗೆ ಕೆಲಸ ಕಲಿತ ಅವರ ಮಗ ಸತೀಶ್ ಪೂಜಾರಿ ಪರಂಪರಾಗತ ಕೆಲಸ ಮುಂದುವರಿಸಿಕೊಂಡು ಬಂದು ಈಗ ಸ್ವಲ್ಪ ಯಾಂತ್ರೀಕೃತಗೊಳಿಸಿ ಹಗ್ಗ ತಯಾರು ಮಾಡುತ್ತಿದ್ದಾರೆ.
ಈಗ ಬಂದಿರುವ ಹಗ್ಗದ ಬೇಡಿಕೆಗೆ ಅನುಗುಣವಾಗಿ ಬೃಹತ್ ಗಾತ್ರದಲ್ಲಿ ಕಾಲು ಇಂಚಿನ 110 ಹಗ್ಗವನ್ನು ಹೆಣೆದು 440 ಎಳೆಯ 580 ಅಡಿಯ ಒಟ್ಟು ಉದ್ದದ ಹಗ್ಗಕ್ಕೆ 50 ಮಂದಿ ಮಾನವ ಶಕ್ತಿಯಿಂದ ಶಕ್ತಿ ನೀಡಿದ ಬಳಿಕ 365 ಅಡಿ ಉದ್ದ, 2 ಅಡಿ ಸುತ್ತಳತೆ ಬಂದು ಒಂದು ಟನ್ ಭಾರಕ್ಕೆ ಬಂದು ನಿಲ್ಲುವ ಅತಿ ಸವಾಲಿನ ಕೆಲಸದಿಂದ ಹಗ್ಗ ತಯಾರಾಗಿದೆ.
ಕೇಂದ್ರ ಸರ್ಕಾರ ನಿಸರ್ಗದತ್ತ ಹಸಿರು ಉದ್ಯಮಕ್ಕೆ ಹಲವು ಸೌಲಭ್ಯ ನೀಡುತ್ತಿದ್ದರೂ ಕಚ್ಛಾವಸ್ತುವಿನ ಕೊರತೆಯಿಂದ ನಾರಿನ ಉದ್ಯಮ ಈಗ ಸವಾಲಾಗಿದೆ. ಅದರಲ್ಲಿ ಇಂಥ ಕೆಲಸ ಮಾಡಿ ಲಾಭ ಸಿಗುವುದು ಕಡಿಮೆ. ಮಧ್ಯವರ್ತಿಗಳು ಕೂಡ ಇದ್ದಾರೆ. ಕೆಲಸ ಸಿಗಬೇಕೇ ಹೊರತು ನೇರವಾಗಿ ನಮ್ಮಲ್ಲಿ ಬರುವವರು ವಿರಳ. ಪರಂಪರಾಗತ ಕೆಲಸ ಮುಂದುವರಿಸಿಕೊಂಡು ಹೋಗುವವರಿಗೆ ಸರ್ಕಾರ ಮತ್ತು ಸ್ಥಳೀಯ ದೇವಸ್ಥಾನಗಳು ಸಹಕಾರ ನೀಡಬೇಕಾಗಿದೆ. ಇದು ಗ್ರಾಮೀಣ ಭಾಗದ ಹತ್ತಾರು ಜನರಿಗೆ ಉದ್ಯೋಗ ನೀಡುತ್ತದೆ. ದೇವಸ್ಥಾನಗಳ ಕೆಲಸ ಮಾಡುವುದರಿಂದ ಮನಸ್ಸಿಗೆ ಸಮಾಧಾನ ಲಭಿಸುತ್ತದೆ.-ಸತೀಶ್ ಪೂಜಾರಿ ಬೆಣ್ಣೆಕುದ್ರು, ಬಾರಕೂರು ತೆಂಗುನಾರಿನ ಉತ್ಪಾದಕರು.