logo

Two Kannada poems at the time of Lockdown

At these difficult times of Lockdown,  amidst the big humanitarian crisis, there are lot of hearts still beat for fellow human beings. These hearts express their concern in many ways.

Here we present two Kannada Poems penned by Eric Soans, Barkur and Bridgit Gonsalves, Barkur , which makes you ponder over this crisis.


ಕಡುಗೆಂಪ ಕಲೆ....










- ಎರಿಕ್ ಸೋನ್ಸ್ ಬಾರಕೂರು


ಕಪ್ಪನೆಯ ಟಾರುರೋಡಿನ ಮೇಲೆ

ಕರೆಗಟ್ಟಿದ ಕಡುಗೆಂಪಿನ ಇಷ್ಟಗಲ ಕಲೆ


ಚಪ್ಪಲಿಯ ಮಗನಿಗೆ ಬಿಟ್ಟುಕೊಟ್ಟ..

ಹೆಗಲಮೇಲೆ ಮಗಳ ಹೊತ್ತ

ಅಪ್ಪನ ಪಾದದ ಬಿರುಕು ಮೂಡಿಸಿದ ರಂಗೋಲಿಯೋ...


ಕಂಕುಳಲ್ಲೆತ್ತಿ ನಡೆದ ತಾಯ 

ಹಾಲೊಣಗಿದ ಜೋಲುಮೊಲೆಯನ್ನೇ

ಕಚ್ಚಿ ಎಳೆದೆಳೆದು ಚೀಪಿದ ಮಗುವ

ಕಟವಾಯಿಯಿಂದಿಳಿದ

ರಕುತದ ಹನಿಯೋ...


ದುಡಿವ ಶಕುತಿಯಿದ್ದೂ ಹೆಂಡತಿ-ಮಕ್ಕಳನ್ನು

ಸಾಕಲಾಗದ ಸ್ಥಿತಿಗೆ ಒಡ್ಡಿದ

ಆಳುವರಸರ ನೆನೆದು

ಆಕ್ರೋಶದಿ ಕೆಂಪೊಡೆದ ಕಣ್ಗಳಿಂದಿಳಿದ

ಅಸಹಾಯಕ ರುಧಿರ ಧಾರೆಯ 

ಕವಲಿನದೊಂದು ಬಿಂದುವೋ...


ಕಂಡಕಂಡಲ್ಲಿ ಮಲಗಿ,

ಕನಿಕರದೋರೋ ಸಹೃದಯಿಗಳೆದುರು ಹಿಡಿಯಾಗಿ

ಮತ್ತೆ ಮೇಲಣ ಕಾಯುವವರೇ ಕಾಲಯಮರಾಗಿ

ಬೀಸಿದ ಬೆತ್ತದಿಂದ ಬೆತ್ತಲಾದ ಬೆನ್ನ ಬಾಸುಂಡೆ

ಸುರಿಸಿದ ನೆತ್ತರ ಚುಕ್ಕಿಯೋ...


ಇರಬಹುದು.. ಇರಬಹುದು..


ಕಲೆ ಒರೆಸಿ ಶುದ್ಧ ಮಾಡಲು ಹೊತ್ತು ಹೆಚ್ಚು ಬೇಕಿಲ್ಲ


ಆದರೆ...


ಸತ್ತರೆ ತನ್ನವರೆದುರು ಸಾಯುವ ಆಸೆಯಿಟ್ಟು

ಮೃಗತೃಷ್ಣವಾದ ನಗರಜೀವನದ ಪೊಳ್ಳುತನವ ಒದ್ದು

ಮನೆಯತ್ತ ಹೊರಟಿಹ ದಾರಿಹೋಕನಿಗೆ

ರಹದಾರಿಯಾದರೂ ನೀಡಿ

ಮರಳಿ ಬರುವ ಯಾಚನೆಯಿಟ್ಟು 

ಓsssಅಲ್ಲಿಯ ತನಕ ಸಾಥ್ ನೀಡಿ

ಆ ರಕುತದ ಕಲೆಗೊಂದು ಹೂಮುತ್ತ ಕೊಡಿ..

'ಅಪ್ಪಾ ಕ್ಷಮಿಸಯ್ಯಾ..' ಎಂದೊಂದು ನಿಟ್ಟುಸಿರು ಬಿಡಿ... 

ನಿಡಿದಾದೊಂದು ಉಸಿರು ಬಿಡಿ..


- ಎರಿಕ್ ಸೋನ್ಸ್ ಬಾರಕೂರು


******************************

ದಾರಿPainting By Wison DSouza, Kayyar









-ಬ್ರಿಜಿತ್ ಬಾರ್ಕೂರು


ಹಿಂತಿರುಗಿ ನೋಡುವ ಮನಸ್ಸಿಲ್ಲ

ಎಷ್ಷು ದೂರ ಸಾಗಿನೋ ಗೊತ್ತಿಲ್ಲ

ಎಲ್ಲರೊಡನೆ‌ ನಾನೂ ಹೊರಟಿಹೆ

ಗಂಟು ಮೂಟೆ ಕಟ್ಟಿ


ಹುಟ್ಟಿ ಬೆಳೆದದ್ದು ಇದೇ

ನಗರದ ಬೀದಿಯಲಿ

ಅವಳೂರು ಯಾವುದು

ಹೇಳಲಿಲ್ಲ ಅವಳು


ಕೇಳಲೀಗ ಉಳಿದಿಲ್ಲ

ಅನಾಥ ನಾನು ನನ್ನದೂ 

ಅಂದುಕೊಂಡಿದ್ದ ನಗರಕ್ಕೀಗ

ನಾನು ಅಪರಿಚಿತ


ಬತ್ತಿ ಹೋದ ಕಾಲುಗಳು

ಅನ್ನ‌ ಕಾಣದ ಹೊಟ್ಟೆ

ನೀರು ಕಾಣದ ಬಟ್ಟೆ

ಯಾಕೀಗ ಅದೆಲ್ಲಾ?


ಅವರ ಹಿಂದೆ ನಾನು

ಗುಂಪಿನೊಳಗೆ‌ ಗೊವಿಂದ ಅಲ್ಲ

ಅವರ‌ ಊರು ನನ್ನದು

ನನ್ನ ದಾರಿಯೂ ಅವರದಲ್ಲ


ನಡೆದಷ್ಟೂ ದಾರಿ

ಗೊರಕೆ ಹೊಡೆಯುವ ರಸ್ತೆಗಳು

ದಿಗಂತ‌ ಕಾಣುವತ್ತ ದೂರ

ಅನಿವಾರ್ಯ ನನಗೆ


ತಲೆ ಮೇಲೆ ಸುಡು ಬಿಸಿಲು ನೆರಳ

ಹುಡುಕಿ ಕೂರುವ ಹಕ್ಕಿಲ್ಲನನಗಿಲ್ಲಿ

ನಡೆದಿಹೆ ಕಾಣದ ಊರಿಗೆ 

ಎಲ್ಲರಿಂದಲೂ ದೂರ ದೂರ..


-ಬ್ರಿಜಿತ್ ಬಾರ್ಕೂರು

Add comment